ADVERTISEMENT

ಹಾಸನ: ಧರ್ಮಸ್ಥಳ ಕ್ಷೇತ್ರಕ್ಕೆ ಚಾರುಕೀರ್ತಿ ಶ್ರೀ ಬೆಂಬಲ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:28 IST
Last Updated 13 ಆಗಸ್ಟ್ 2025, 2:28 IST
ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ   

ಶ್ರವಣಬೆಳಗೊಳ: ಧರ್ಮಸ್ಥಳ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಇಲ್ಲಿನ ದಿಗಂಬರ ಜೈನ ಮಹಾಸಂಸ್ಥಾನ ಮಠದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಖಂಡಿಸಿದ್ದಾರೆ.

‘ಧರ್ಮಸ್ಥಳ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆ ಅವರಿಗೆ ಜೈನಮಠದ ಸಂಪೂರ್ಣ ಬೆಂಬಲ ಇದೆ’ ಎಂದು ಹೇಳಿರುವ ಅವರು, ‘ಧರ್ಮಸ್ಥಳ ಹೆಸರು ಕೇಳಿದಾಗಲೇ ನಮ್ಮ ಹೃದಯದಲ್ಲಿ ಧರ್ಮದ ಪರಿಮಳ, ದಾನದ ಪಾವಿತ್ರ್ಯ, ಸೇವೆಯ ಮಧುರ ಸ್ಮೃತಿಗಳು ಮೂಡುತ್ತವೆ. ನಿಜವಾದ ಮಾನವೀಯತೆ ತಾಣವಾಗಿ ಜಾತಿ-ಧರ್ಮ-ಮತಗಳ ಭೇದವಿಲ್ಲದೇ ಚರ್ತುವಿಧ ದಾನ, ಸೇವಾ ಪರಂಪರೆ ನಡೆಸಿಕೊಂಡು ಬಂದಿದೆ’ ಎಂದು ತಿಳಿಸಿದ್ದಾರೆ.

‘ಇಂತಹ ಪವಿತ್ರ ಕ್ಷೇತ್ರ ಹಾಗೂ ವ್ಯಕ್ತಿತ್ವದ ವಿರುದ್ಧ ತಪ್ಪು ಮತ್ತು ಅವಹೇಳನಕಾರಿ ಹೇಳಿಕೆ ಪ್ರಸಾರವಾಗುತ್ತಿರುವುದು ಖೇದಕರ. ಧರ್ಮ-ಸಂಸ್ಕೃತಿಗೆ ಅವಮಾನಕಾರಿ. ಇಂತಹ ಹೇಳಿಕೆಗಳು ಸಮಾಜದಲ್ಲಿ ಭಿನ್ನಾಭಿಪ್ರಾಯ, ದ್ವೇಷ, ಅಸಮಾಧಾನ ಹುಟ್ಟಿಸುತ್ತವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಇದು ಕೇವಲ ಹೆಗ್ಗಡೆಯವರ ಮೇಲೆ ಆಗುತ್ತಿರುವ ಅವಮಾನವಲ್ಲ, ನಮ್ಮ ಸಂಸ್ಕೃತಿ, ನಮ್ಮ ಧರ್ಮ, ನಮ್ಮ ಸೇವಾ ಪರಂಪರೆಯ ಮೇಲಿನ ಅವಮಾನವಾಗಿದೆ ಎಂಬುದನ್ನು ಧರ್ಮಾಭಿಮಾನಿಗಳು ಅರಿಯಬೇಕಿದೆ’ ಎಂದು ತಿಳಿಸಿದ್ದಾರೆ.

‘ಸಮಾಜದ ಎಲ್ಲ ವರ್ಗದವರು ಪರಸ್ಪರ ಗೌರವದಿಂದ, ಸತ್ಯಾಸತ್ಯತೆ ಪರಿಶೀಲಿಸಿ, ಸೌಹಾರ್ದ ಉಳಿಸಿಕೊಂಡು ನಡೆದುಕೊಳ್ಳಬೇಕು. ಧರ್ಮಸ್ಥಳ ಕ್ಷೇತ್ರದ ಮೇಲೆ ಹಾಗೂ ವೀರೇಂದ್ರ ಹೆಗ್ಗಡೆ ಅವರೊಂದಿಗೆ ನಮ್ಮ ಬೆಂಬಲ ಸದಾಕಾಲ ಅಚಲವಾಗಿರುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.