ADVERTISEMENT

ಹಾಸನ | ಕ್ರಿಸ್‌ಮಸ್‌ ಸಂಭ್ರಮ: ಜಿಲ್ಲೆಯಲ್ಲಿ ಶಾಂತಿಧೂತನ ಸ್ಮರಣೆ

ದೀಪಾಲಂಕಾರಗಳಿಂದ ಕಂಗೊಳಿಸಿದ ಚರ್ಚ್‌ಗಳು, ವಿಶೇಷ ಪ‍್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 15:38 IST
Last Updated 25 ಡಿಸೆಂಬರ್ 2021, 15:38 IST
ಹಾಸನದ ಸಂತ ಅಂತೋಣಿ ದೇವಾಲಯದಲ್ಲಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು
ಹಾಸನದ ಸಂತ ಅಂತೋಣಿ ದೇವಾಲಯದಲ್ಲಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು   

ಹಾಸನ: ಕ್ರಿಸ್‌ಮಸ್‌ ಹಬ್ಬವನ್ನು ಕ್ರೈಸ್ತರು ಶನಿವಾರ ಜಿಲ್ಲೆಯಲ್ಲಿ ಸಡಗರ, ಸಂಭ್ರಮದಿಂದ ಆಚರಿಸಿದರು.

ಕೋವಿಡ್ ಮಾರ್ಗಸೂಚಿ ಪ್ರಕಾರ ಕಾರ್ಯಕ್ರಮಗಳು ನಡೆದವು. ಶುಕ್ರವಾರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭ ಗೊಂಡಿದ್ದವು. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಕೋವಿಡ್‌ ನಿರ್ಮೂಲನೆಗಾಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಹಬ್ಬದ ಪ್ರಯುಕ್ತ ದೀಪಾಲಂಕಾರ ಗಳಿಂದ ಚರ್ಚ್‌ಗಳು ಕಂಗೊಳಿಸು ತ್ತಿದ್ದವು. ಕ್ರಿಸ್ತನಜನನವನ್ನು ಸಾರುವ ಗೋದಲಿಗಳನ್ನು ಸಿದ್ಧಪಡಿಸಿ, ಅಲಂಕರಿಸಲಾಗಿತ್ತು. ಸಾಂಟಾಕ್ಲಾಸ್‌ ವೇಷಧಾರಿಗಳು ಗಮನ ಸೆಳೆದರು.‌

ADVERTISEMENT

ಧರ್ಮಗುರುಗಳು ಏಸುವಿನ ಜೀವನ ಸಂದೇಶವನ್ನು ಸಾರಿದರು. ಆರಾಧನೆ ಮುಗಿದ ಬಳಿಕಎಲ್ಲರೂ ಪರಸ್ಪರ ಕೇಕ್‌, ಸಿಹಿ ಹಂಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ನಗರದ ಸಂತ ಅಂತೋಣಿ ದೇವಾಲಯದಲ್ಲಿ ಗುರಶ್ರೇಷ್ಠ ಫ್ಯಾ.ಪ್ಯಾಟ್ರಿಕ್ ಜೋನ್ಸ್‌ ರಾವ್‌ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 8 ರಿಂದ 9.30ರವರೆಗೆಪ್ರಾರ್ಥನೆ ನಡೆಯಿತು. ಈ ವೇಳೆ ಕ್ಯಾರಲ್‌ ಗೀತೆಗಳು ಮೊಳಗಿದವು.

ಆರ್‌.ಸಿ. ರಸ್ತೆಯ ಸಿಎಸ್‌ಐ ವೆಸ್ಲಿ ಚರ್ಚ್‌ನಲ್ಲಿ ಸಭಾ ಪಾಲಕ ವಿ. ದೇವಕುಮಾರ್ ನೇತೃತ್ವದಲ್ಲಿಬೆಳಿಗ್ಗೆ ಪ್ರಾರ್ಥನೆ ನಡೆಯಿತು. ಮಧ್ಯಾಹ್ನ ಆಟೋಟ ಸ್ಪರ್ಧೆ, ಸಂಜೆ ಕ್ಯಾರಲ್‌ ಗಾಯನನಡೆಯಿತು.

ಅಲ್ಲದೇ ಶಾಲೋಮ್ ಚರ್ಚ್‌, ಶೆಟ್ಟಿಹಳ್ಳಿ ಚರ್ಚ್‌, ಗಾಡೇನಹಳ್ಳಿ, ದಾಸಪುರ, ಹೊಸಕೊಪ್ಪಲಿನ ಪ್ರಾರ್ಥನಾ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಚರ್ಚ್‌ಗಳಲ್ಲಿ ಸಂಭ್ರಮ ನೆಲೆಸಿತ್ತು. ಯುವಕ–ಯುವತಿಯರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ವಿಶೇಷವಾಗಿ ತಯಾರಿಸಿದ್ದ ಸಿಹಿ ತಿಂಡಿ, ಕೇಕ್‌ಗಳನ್ನುಹಂಚಿ ತಿನ್ನುವ ಮೂಲಕ ಸೌಹಾರ್ದದ ಸಂಕೇತ ಸಾರಿದರು. ಹಬ್ಬಕ್ಕೆ ಚಿಕನ್‌, ಮಟನ್ ಬಿರಿಯಾನಿ, ಕಬಾಬ್ ಸೇರಿದಂತೆ ಮಾಂಸಾಹಾರದ ಖಾದ್ಯಗಳನ್ನು ಮನೆನಗಳಲ್ಲಿತಯಾರಿಸಲಾಗಿತ್ತು.

ಸಿಎಸ್‌ಐ ವೆಸ್ಲಿ ಚರ್ಚ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಇತರೆ ಮುಖಂಡರು ಭೇಟಿ ನೀಡಿ ಕ್ರಿಸ್‌ಮಸ್‌ಶುಭಾಶಯ ಕೋರಿದರು.

ಕ್ರಿಸ್‌ಮಸ್ ಸಡಗರ
ನುಗ್ಗೇಹಳ್ಳಿ:
ಇಲ್ಲಿನ ಹಿರೀಸಾವೆ ರಸ್ತೆಯಲ್ಲಿರುವ ಸಿಎಸ್‌ಐ ಗ್ರೇಸ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗುರುವಾರ ರಾತ್ರಿ 12 ಗಂಟೆಗೆ ಚರ್ಚ್‌ನಲ್ಲಿ ರೆ.ಗಿರಿರಾಜು ಮತ್ತು ಮನೋಜ್‌ ಅವರು ನೆರೆದಿದ್ದ ಕ್ರಿಶ್ಚಿಯನ್ನರು ಬಂಧುಗಳಿಗೆ ಶುಭಕೋರಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಶುಕ್ರವಾರ ಬೆಳಿಗ್ಗೆ ಚರ್ಚ್‌ನಲ್ಲಿ ಹೊಸಬಟ್ಟೆ ತೊಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಾಗೂ ಚರ್ಚ್ ಆವರಣದಲ್ಲಿ ಕೇಕ್ ಕತ್ತರಿಸಿ ನೆರೆದಿದ್ದ ಎಲ್ಲರಿಗೂ ಹಂಚುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿ ಭಾಗ್ಯಾ ಜೇಮ್ಸ್‌ ಪ್ರಭಾಕರ್, ಪ್ರಕಾಶ್, ನಿಶ್ಚಲ್‌ ಐಸಾಕ್, ಮೇಬಲ್‌ ದೇವಪ್ರಸಾದ್, ಅರುಣ ನಿಶ್ಚಲ್, ಜಾನ್‌ವಿಲ್ಸನ್, ಭಾಸ್ಕರ್, ಲಲ್ಲಿ ಲಾರೆನ್ಸ್, ಅನಿತಾ ಜಯಪ್ಪ, ಮತ್ತು ಚರ್ಚ್ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಿದ್ದ ದಿ.ಚಿನ್ನಮ್ಮ ಐಸಾಕ್ ಅವರನ್ನು ಸ್ಮರಿಸಲಾಯಿತು.

ಹಾಗೂ ಹೋಬಳಿಯ ಎಂ.ದಾಸಾಪುರ ಗ್ರಾಮದ ಸ್ವರ್ಗಾರೋಹಣ ಮಾತೆ ದೇವಾಲಯ ಚರ್ಚ್‌ನಲ್ಲಿ ಗ್ರಾಮಸ್ಥರು ಕ್ರಿಸ್‌ಮಸ್ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕೇಕ್ ವಿತರಿಸಿದರು.

ಚರ್ಚ್‌ ಆವರಣದಲ್ಲಿ ಬಾಲ ಏಸುವಿನ ಜನ್ಮವೃತ್ತಾಂತದ ಬಗ್ಗೆ ಕಲಾಕೃತಿಯನ್ನು ಪ್ರದರ್ಶಿಸಲಾಯಿತು. ಚರ್ಚ್‌ ಗುರುಗಳಾದ ಎಂ.ಶಾಂತರಾಜು, ಫಾ. ಪ್ರಸನ್ನ, ಫಾ. ಜಾರ್ಜ್, ಜಿಲ್ಲಾ ಕ್ರೈಸ್ತ ಸಮಾಜದ ಜಿಲ್ಲಾಧ್ಯಕ್ಷ ವಿಕ್ಟರ್, ಗ್ರಾ.ಪಂ. ಸದಸ್ಯರಾದ ಜಸ್ವಂತ್ ಮೇರಿ, ಸರೋಜಾ ಸೇರಿದಂತೆ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.