
ಅರಕಲಗೂಡು: ದುಡಿಯುವ ಜನರ ಮುಂಚೂಣಿಯ ಸಂಘಟನೆಯಾದ ಸಿಐಟಿಯುನ 16ನೇ ರಾಜ್ಯ ಮಟ್ಟದ ಸಮ್ಮೇಳನವು ನ. 13 ರಿಂದ 15ರವರೆಗೆ ಹಾಸನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾ ಮುಖಂಡ ಲಿಂಗರಾಜ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಸನದ ಅಂಬೇಡ್ಕರ್ ಭವನದಲ್ಲಿ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಕಾರ್ಮಿಕರ ಸಮಸ್ಯೆಗಳ ಕುರಿತಾದ ಹಲವು ವಿಷಯಗಳು ಚರ್ಚಿತವಾಗಲಿದೆ. ಮಾಸಿಕ ₹ 36 ಸಾವಿರ ಕನಿಷ್ಠ ವೇತನ, ₹10 ಸಾವಿರ ಪಿಂಚಣಿ, ಉದ್ಯೋಗ ಹಾಗೂ ಸಾಮಾಜಿಕ ಭದ್ರತೆಗಾಗಿ ಒತ್ತಾಯ, ಕರಾಳ ಕಾರ್ಮಿಕ ಸಂಹಿತೆಗಳಿಗೆ ವಿರೋಧ, ಸಮೃದ್ಧ ಹಾಗೂ ಸೌಹಾರ್ದ ಕರ್ನಾಟಕ ನಿರ್ಮಾಣದ ಉದ್ದೇಶವನ್ನು ಇಟ್ಟುಕೊಂಡು ಸಮ್ಮೇಳನ ಆಯೋಜಿಸಲಾಗಿದೆ’ ಎಂದರು.
‘ಜಿಲ್ಲೆಯ 8 ತಾಲ್ಲೂಕುಗಳಲ್ಲಿ ಸಿಐಟಿಯು ಸಂಘಟನೆ ಇದ್ದು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ. ಅಂಗನವಾಡಿ, ಗ್ರಾಮ ಪಂಚಾಯಿತಿ, ಬಿಸಿಯೂಟ, ಹಾಸ್ಟೆಲ್ ನೌಕರರು, ಪ್ಲಾಂಟೇಷನ್, ಗುತ್ತಿಗೆ, ಹೊರಗುತ್ತಿಗೆ ನೌಕರರು ಸೇರಿದಂತೆ ವಿವಿಧ ಕಾರ್ಮಿಕರ ಸಂಘಗಳನ್ನು ರಚಿಸಿ ಅವರ ಹಕ್ಕುಗಳಿಗಾಗಿ ಹೋರಾಟ ನಡೆಸಲಾಗುತ್ತಿದೆ. ನವ ಉದಾರವಾದಿ ನೀತಿಗಳನ್ನು ತೀವ್ರವಾಗಿ ಜಾರಿಗೊಳಿಸುವ ಮೂಲಕ ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕು ಗೊಳಿಸಲಾಗುತ್ತಿದ್ದು ಈ ಎಲ್ಲ ಸಮಸ್ಯೆಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಿ ನಿರ್ಣಯಗಳನ್ನು ಅಂಗೀಕರಿಸಲಾಗುವುದು’ ಎಂದರು.
‘ಸಮ್ಮೇಳನಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ 450 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಸಮ್ಮೇಳನದ ಕೊನೆಯ ದಿನವಾದ ನ. 15ರಂದು 10 ಸಾವಿರ ಕಾರ್ಮಿಕರಿಂದ ಬೃಹತ್ ಮೆರವಣಿಗೆ ನಡೆಯಲಿದೆ. ಒಂದು ಸಾವಿರ ಕೆಂಪು ಸಮವಸ್ತ್ರ ಧಾರಿಗಳಿಂದ ಪಥಸಂಚಲನ ನಡೆಯಲಿದೆ’ ಎಂದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅಶೋಕ್ ಅತ್ನಿ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಆರ್. ಚಂದ್ರು, ಮುಖಂಡರಾದ ಗೀತಾ, ಕೆ.ಎಸ್. ಮಂಜುನಾಥ್, ಸುಬ್ರಹ್ಮಣ್ಯ ಗೋಷ್ಠಿಯಲ್ಲಿದ್ದರು.