ADVERTISEMENT

ಸಿಎಂ ನಿವಾಸ ಎದುರು ಧರಣಿ ಎಚ್ಚರಿಕೆ ನೀಡಿದ ಶಾಸಕ ಎಚ್.ಡಿ. ರೇವಣ್ಣ

ಮೊಸಳೆ ಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಳಾಂತರಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 14:13 IST
Last Updated 26 ಜೂನ್ 2020, 14:13 IST
ಶಾಸಕ ಎಚ್‌.ಡಿ.ರೇವಣ್ಣ
ಶಾಸಕ ಎಚ್‌.ಡಿ.ರೇವಣ್ಣ   

ಹಾಸನ: ತಾಲ್ಲೂಕಿನ ಮೊಸಳೆ ಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ವರ್ಗಾಯಿಸುವಂತೆ ಸರ್ಕಾರ ನೀಡಿರುವ ಆದೇಶವನ್ನು ವಾಪಸ್‌ ಪಡೆಯದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಶಾಸಕ ಎಚ್‌.ಡಿ. ರೇವಣ್ಣ ಎಚ್ಚರಿಕೆ ನೀಡಿದರು.

ಶಿಕ್ಷಣ ಇಲಾಖೆ (ತಾಂತ್ರಿಕ ಶಿಕ್ಷಣ)ಯ ಅಧೀನ ಕಾರ್ಯದರ್ಶಿ ಎಂ.ಜಿ. ವೆಂಕಟೇಶಯ್ಯ ಅವರು ಜೂನ್‌ 5 ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಿಗೆ ಬರೆದಿರುವ ಪತ್ರದಲ್ಲಿ, ‘ಕಾಲೇಜಿಗೆ ದಾಖಲಾಗಿರುವ ವಿದ್ಯಾರ್ಥಿಗಳನ್ನು ಹಾಸನ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ವರ್ಗಾಯಿಸಬೇಕು’ ಎಂದು ಹೇಳಿದ್ದಾರೆ. ಪ್ರಸ್ತುತ ಮೊಸಳೆ ಹೊಸಳ್ಳಿ ಕಾಲೇಜಿನಲ್ಲಿ 173 ಜನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಸಾಕಷ್ಟು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.ಯಾವುದೇ ಕಾರಣಕ್ಕೂ ಮೊಸಳೆ ಹೊಸಳ್ಳಿ ಕಾಲೇಜು ಮುಚ್ಚಲು ಅವಕಾಶ ಕೊಡುವುದಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಹಲವು ಎಂಜಿನಿಯರಿಂಗ್‌ ಕಾಲೇಜುಗಳಿವೆ. ಮೊಸಳೆ ಹೊಸಳ್ಳಿ ಕಾಲೇಜಿಗಿಂತಲೂ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿರುವ ಕಾಲೇಜುಗಳನ್ನು ಹಾಗೆಯೇ ಬಿಡಲಾಗಿದೆ. ಉದಾಹರಣೆಗೆ ಬೆಂಗಳೂರು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 162, ಕಾರವಾರ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 62, ಚಾಮರಾಜನಗರ ಕಾಲೇಜಿನಲ್ಲಿ 96, ಹೂವಿನಡಗಲಿ ಕಾಲೇಜಿನಲ್ಲಿ 75, ಗಂಗಾವತಿ ಕಾಲೇಜಿನಲ್ಲಿ 47 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ವರ್ಷಕ್ಕೆ ₹7 ಸಾವಿರ ಶುಲ್ಕ ಪಾವತಿಸಬೇಕು. ಖಾಸಗಿ ಸಂಸ್ಥೆಗಳಲ್ಲಿ ಲಕ್ಷಾಂತರ ರೂಪಾಯಿ ಡೋನೆಷನ್‌ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ಫೆ. 2ರಂದು ನಡೆದ ವಿಧಾನಸಭಾ ಅಧಿವೇಶನದಲ್ಲಿ, ಎಂಜನಿಯರಿಂಗ್ ಕಾಲೇಜು ಮುಚ್ಚುವುದಿಲ್ಲ. ಅದಕ್ಕೆ ಬೇಕಾದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಸಿ.ಎಂ ಮಾತಿಗೆ ಬೆಲೆ ಇಲ್ಲವೇ? ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಶಾಶ್ವತವಾಗಿ ಇರುವುದಿಲ್ಲ. ಇಳಿ ವಯಸ್ಸಿನಲ್ಲಿ ಸಿಎಂ ದ್ವೇಷದ ರಾಜಕಾರಣ ಮಾಡುವುದನ್ನು ಬಿಟ್ಟು, ಅಭಿವೃದ್ಧಿಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.

‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಅನೇಕ ಕಾಮಗಾರಿಗಳು ನಿಂತು ಹೋಗಿವೆ. ಹಾಸನ ವಿಮಾನ ನಿಲ್ದಾಣಕ್ಕೆ ಟೆಂಡರ್‌ ಪ್ರಕ್ರಿಯೆ ಮುಗಿದರೂ ಕಾಮಗಾರಿಗೆ ಅನುಮತಿ ನೀಡಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಟೆಂಡರ್‌ ಕರೆದು ಕೆಲಸಕ್ಕೆ ಚಾಲನೆ ನೀಡಲಾಗಿದೆ. ಕಾವೇರಿ ಕಣಿವೆ ಭಾಗದಲ್ಲಿ ನೀರಾವರಿ ಇಲಾಖೆ ಕೆಲಸಗಳು ನಡೆದಿಲ್ಲ. ಬಿಜೆಪಿ ಶಾಸಕರ ಕ್ಷೇತ್ರದ ಕೆಲಸಗಳು ನಡೆಯುತ್ತಿವೆ. ನಾನು ಸಚಿವನಾಗಿದ್ದ ವೇಳೆ ಯಡಿಯೂರಪ್ಪ ಅವರ ಅಳಿಯನನ್ನು ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಯಲ್ಲಿಯೇ ಮುಂದುವರಿಸಿದೆ. ಕೊನೆಗೂ ಅವರಿಗೆ ಬಡ್ತಿ ಸಹ ನೀಡಲಾಯಿತು. ನನಗೆ ದ್ವೇಷದ ರಾಜಕಾರಣ ಮಾಡುವ ಅಗತ್ಯವಿಲ್ಲ. ಈ ಎಲ್ಲಾ ವಿಚಾರ ಕುರಿತು ಸಿಎಂ ಗೆ ಪತ್ರ ಬರೆಯಲಾಗುವುದು. ಸಕಾರಾತ್ಮ ಪ್ರತಿಕ್ರಿಯೆ ಸಿಗದಿದ್ದರೆ ರಸ್ತೆಗಿಳಿದು ಹೋರಾಟ ಮಾಡಲಾಗುವುದು’ ಎಂದು ಗುಡುಗಿದರು.

ರಾಜ್ಯ ಸರ್ಕಾರ ಭೂ ಮಾಫಿಯಾ, ರಿಯಲ್‌ ಎಸ್ಟೇಟ್‌ ದಂದೆ ಮಾಡುವವರು, ಖಾಸಗಿ ಶಿಕ್ಷಣ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಹಾಗೂ ಬಿಲ್ಡರ್‌ಗಳ ಜೊತೆಗೆ ಶಾಮೀಲ್‌ ಆಗಿ ಭೂ ‌ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದೆ.ರಾಜ್ಯದ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.