ADVERTISEMENT

ಹಾಸನದ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಬೈರತಿ  ಸುರೇಶ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 11:36 IST
Last Updated 5 ಜೂನ್ 2023, 11:36 IST
   

ಹಾಸನ :ಹಾಸನ ನಗರದ ಸಮಗ್ರ ಅಭಿವೃದ್ಧಿಗೆ  ಬದ್ಧವಿರುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗಿನ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಾಸನಕ್ಕೆ ಕುಡಿಯುವ ನೀರು ಪೂರೈಕೆ, ಯುಜಿಡಿ ಸಂಪರ್ಕ, ಒಂದು ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಲೇಔಟ್ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು ಮಾಹಿತಿ ಪಡೆಯಲಾಗಿದೆ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.

ತಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತು ಅರಸೀಕೆರೆ, ಹಾಸನ ಶಾಸಕರು ಕೆಲವು ಸಮಸ್ಯೆಗಳನ್ನು ಹೇಳಿದ್ದಾರೆ. ಇದಕ್ಕೆ ಶಾಶ್ವತವಾದ ಪರಿಹಾರ ಒದಗಿಸಲು ನಿರ್ಧರಿಸಿದ್ದೇವೆ. ಬುಧವಾರ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ಹಾಸನಕ್ಕೆ ಒಳ್ಳೆಯದಾಗಬೇಕು. ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ADVERTISEMENT

ನಗರದ ಹೊರ ವಲಯದಲ್ಲಿ ನಿರ್ಮಾಣ ವಾಗುತ್ತಿರುವ ಹೊಸ ಬಡಾವಣೆ ಪ್ರಗತಿಯಲ್ಲಿದ್ದು 15000 ನಿವೇಶನಗಳಿಗೆ 25 ಸಾವಿರ ಅರ್ಜಿ ಬಂದಿದೆ. ಶೀಘ್ರದಲ್ಲಿ ತಾಂತ್ರಿಕವಾಗಿ ಮಾನದಂಡ ರೂಪಿಸಿ ನಿವೇಶನ ಹಂಚಿಕೆ ಕುರಿತು ಕ್ರಮ ಜರುಗಿಸುವುದಾಗಿ ತಿಳಿಸಿದ ಅವರು ನಿವೇಶನ ಹಂಚಿಕೆಯಾಗದೇ ಉಳಿಯುವ 11ಸಾವಿರ ಹೆಚ್ಚುವರಿ ಅರ್ಜಿದಾರರಿಗೂ ಹೆಚ್ಚುವರಿ ಭೂಮಿ ಪಡೆದು ನಿವೇಶನ ಹಂಚಲು ಸ್ಥಳೀಯ ಶಾಸಕರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸುತ್ತಿರುವ ಬಡಾವಣೆ  ಗುತ್ತಿಗೆಯಲ್ಲಿ ಅಕ್ರಮವಾಗಿರುವ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ. ಕಾಲ ಕಾಲದ ಎಸ್.ಆರ್ ದರದಂತೆ ನಿರ್ಮಾಣ ಕಾರ್ಯದ ದರ ಹೆಚ್ಚುವರಿಯಾಗಿ ರುತ್ತದೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಇನ್ನು ಹಾಸನದಲ್ಲಿ‌‌ ಈ ಹಿಂದೆ ನಿರ್ಮಾಣವಾಗಿದ್ದ ಎಸ್.ಎಂ.ಕೃಷ್ಣ ಬಡಾವಣೆ ವಾಸಿಗಳ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಸಾಗಿದ್ದು, ಈಗಾಗಲೇ ಸಬ್ ಸ್ಟೇಷನ್ ನಿರ್ಮಾಣ ಪ್ರಗತಿಯಲ್ಲಿದೆ ಎಂದರು.

ನಗರದಲ್ಲಿ  ಪ್ರಗತಿಯ ಹಂತದಲ್ಲಿರುವ ಅಮೃತ್ ಕುಡಿಯುವ ನೀರಿನ‌ಯೋಜನೆಯಿಂದ ಇಡೀ ನಗರಕ್ಕೆ ನೀರು ಪೂರೈಸುವಲ್ಲಿ ವ್ಯತ್ಯಯ ಉಂಟಾಗಿದ್ದು ಅಮೃತ್ ಯೋಜನೆ 2 ನೇ ಹಂತದ  ಮೂಲಕ ನಗರದ ಉಳಿದ  ಬಡಾವಣೆಗಳಿಗೂ ನೀರು ತಲುಪಿಸುವ ಕಾರ್ಯಕ್ಕೆ ಮುಂದಾಗುವುದಾಗಿ ತಿಳಿಸಿದರು.

ಕಳೆದ ಸರ್ಕಾರದ ಅವಧಿಯಲ್ಲಿ ನಗರಸಭೆ ವ್ಯಾಪ್ತಿಗೆ ಸೇರಿದ 25 ಗ್ರಾಮಗಳ ಆಸ್ತಿ ಖಾತೆ ಸಮಸ್ಯೆ ಕುರಿತು ಸಂಬಂಧಪಟ್ಟ ಇಲಾಖೆ ಸಚಿವರು , ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರವಾಗಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದರು.

ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಎಚ್.ಪಿ.ಸ್ವರೂಪ್, ಜಿಲ್ಲಾಧಿಕಾರಿ ಅರ್ಚನಾ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.