ADVERTISEMENT

ಶಿರಾ, ಆರ್‌ಆರ್ ನಗರ ಉಪ ಚುನಾವಣೆ | ಕಾಂಗ್ರೆಸ್‌ –ಬಿಜೆಪಿ ಒಪ್ಪಂದ: ರೇವಣ್ಣ ಆರೋಪ

ಶಿರಾ, ರಾಜರಾಜೇಶ್ವರಿ ನಗರ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 15:49 IST
Last Updated 29 ಅಕ್ಟೋಬರ್ 2020, 15:49 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆಯೇ ಒಪ್ಪಂದ ಆಗಿರಬೇಕಷ್ಟೇ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಅಧಿಕಾರಕ್ಕಾಗಿ ಜೆಡಿಎಸ್‌ ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಬಿಜೆಪಿ ಸರ್ಕಾರಕ್ಕೆ ಜನರು ಬಹುಮತ ನೀಡಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಜೆಡಿಎಸ್ ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಡೆಸುವುದಕ್ಕೆ ಕಾಂಗ್ರೆಸ್ ಸಹಕಾರ ಇದೆ. ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಅದೇ ಪಕ್ಷದವರು ಕಾರಣವಾಗಿದ್ದಾರೆ. ಹೀಗಾಗಿ ಶಿರಾದಲ್ಲಿಯೂ ಅವರ ನಡುವೆಯೇ ಒಳ ಒಪ್ಪಂದ ಏರ್ಪಟ್ಟಿರಬಹುದು.ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜೆಡಿಎಸ್ ನಾಯಕರಿಗೆ ಸದನದಲ್ಲಿ ಮಾತನಾಡಲು ಆಗುವುದಿಲ್ಲ ಎನ್ನುವ ಡಿ.ಕೆ.ಶಿವಕುಮಾರ್ ಅವರ ಟೀಕೆಗೆ ಪ್ರತಿಕ್ರಿಯಿಸುವುದಿಲ್ಲ. ‘ಅವರು ಈಗ ದೊಡ್ಡ ಮನುಷ್ಯರು ಅವರ ಬಗ್ಗೆ ನಾನು ಮಾತನಾಡಲು ಆಗುವುದಿಲ್ಲ’ ಎಂದುತಿರುಗೇಟು ನೀಡಿದರು.

ADVERTISEMENT

ರಾಜ್ಯದ48 ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಹಿಂಬಾಗಿಲಿನಿಂದ ಹಿಡಿಯಲು ಬಿಜೆಪಿ ಕಾನೂನು ಗಾಳಿಗೆ ತೂರಿದೆ. ಯಾವುದೇ ಒಂದು ಚುನಾಯಿತ ಸಂಸ್ಥೆ ಸಭೆ ನಡೆಸಬೇಕಿದ್ದರೆ ಒಟ್ಟು ಸದಸ್ಯ ಬಲದ ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸದಸ್ಯರು ಹಾಜರಿರಬೇಕು ಎಂಬ ನಿಯಮವಿತ್ತು. ಅದನ್ನು ವಿಧಾನಸಭೆಯಲ್ಲಿ ಯಾವ ಚರ್ಚೆಯೂ ಇಲ್ಲದೆ ಮೂರನೇ ಒಂದು ಭಾಗದಷ್ಟು ಸದಸ್ಯರಿದ್ದರೆ ಸಭೆ ನಡೆಸಬಹುದು ಎಂದು ತಿದ್ದುಪಡಿ ಮಾಡಿದ್ದಾರೆ. ಇದನ್ನೇ ವಿಧಾನಸಭೆಗೂ ಅನ್ವಯಿಸುವರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನದ 34ನೇ ವಾರ್ಡ್ ಸದಸ್ಯ ಮೋಹನ್‌ ಅವರು ಎಸ್‌ಟಿ ಮೀಸಲಾತಿಯಡಿ ಗೆದ್ದು ಬಂದಿದ್ದಾರೆ. ಈಗ ಅವರನ್ನೇ ಬಿಜೆಪಿ ಅಧ್ಯಕ್ಷರಾಗಿ ಮಾಡಲು ಹೊರಟಿದೆ. ಆದರೆ ಅವರು ಮರಾಠ ಸಮುದಾಯಕ್ಕೆ ಸೇರಿದವರು ಎನ್ನುವುದು ಅವರ ತಂದೆಯ ಶೈಕ್ಷಣಿಕ ದಾಖಲೆಗಳಲ್ಲಿಯೇ ಇದೆ. ಮೋಹನ್ ಅವರ ಚನ್ನಪಟ್ಟಣ ಶಾಲೆಯ ದಾಖಲಾತಿಗಳಲ್ಲಿ ಅವರ ಜಾತಿಯನ್ನು ತಿದ್ದಿ ಗೋಂಡ ಎಂದು ಬದಲಿಸಲಾಗಿದೆ. ರಾಜ್ಯದಲ್ಲಿ ಗೋಂಡ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಲಭ್ಯವಿಲ್ಲ. ಈ ಎಲ್ಲ ವಿಷಯಗಳನ್ನು ಮುಂದೆ ನ್ಯಾಯಾಲಯದ ಗಮನಕ್ಕೆ ತರುತ್ತೇವೆ ಎಂದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಾರದು, ನಕಲಿ ಜಾತಿ ಪ್ರಮಾಣ ಪತ್ರದ ಆರೋಪ ಹೊತ್ತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಚುನಾವಣಾಧಿಕಾರಿಗೆ ಮನವಿ ನೀಡುತ್ತೇವೆ. ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಅವರ ಪ್ರಯತ್ನಕ್ಕೆ ಹೆಚ್ಚು ದಿನಗಳು ಯಶಸ್ಸು ದೊರೆಯುವುದಿಲ್ಲ. ದೇವರೇ ಶಿಕ್ಷಿಸುವ ಕಾಲ ಬರುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಇದ್ದರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.