ADVERTISEMENT

ಹೆದ್ದಾರಿ ಪಕ್ಕ ಬಸ್ ಶೆಲ್ಟರ್ ನಿರ್ಮಾಣ: ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿಕೆ

ಸೆಸ್ಕ್, ರಾಷ್ಟೀಯ ಹೆದ್ದಾರಿ ಗುತ್ತಿಗೆದಾರರ ಸಭೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 13:14 IST
Last Updated 17 ಜೂನ್ 2025, 13:14 IST
ಚನ್ನರಾಯಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿದರು. ಆರ್. ರತ್ನಾ, ಸೋಮಶೇಖರ್, ಎನ್.ಆರ್. ಹರೀಶ್, ವೆಂಕಟೇಶ್ ಭಾಗವಹಿಸಿದ್ದರು
ಚನ್ನರಾಯಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿದರು. ಆರ್. ರತ್ನಾ, ಸೋಮಶೇಖರ್, ಎನ್.ಆರ್. ಹರೀಶ್, ವೆಂಕಟೇಶ್ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗದಲ್ಲಿ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸೆಸ್ಕ್, ರಾಷ್ಟೀಯ ಹೆದ್ದಾರಿ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ ಅವರು, ‘ಹೆದ್ದಾರಿಯಲ್ಲಿ ಶೇ 98ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್ ದೀಪ ಆನ್ ಮಾಡುವುದು ಮತ್ತು ಬಸ್ ಶೆಲ್ಟರ್ ನಿರ್ಮಾಣ ಸೇರಿ ಸಣ್ಣಪುಟ್ಟ ಕೆಲಸ ಬಾಕಿ ಇದೆ’ ಎಂದರು.

‘ಹೆದ್ದಾರಿಯ ಎರಡು ಬದಿಯಲ್ಲಿ ಸರ್ವಿಸ್ ರಸ್ತೆಯಲ್ಲಿರುವ ಕಿರೀಸಾವೆ, ಹಿರೀಸಾವೆ, ಹೆಗ್ಗಡಿಹಳ್ಳಿ, ಮಾದಿಹಳ್ಳಿ, ಮಟ್ಟನವಿಲೆ, ಎಚ್. ಹೊನ್ನೇನಹಳ್ಳಿ, ಗೌಡಗೆರೆ, ಮಲ್ಲವನಘಟ್ಟ, ಜೋಗಿಪುರ, ಶೆಟ್ಟಿಹಳ್ಳಿ, ಬರಗೂರು ಹ್ಯಾಂಡ್ ಪೋಸ್ಟ್, ಗುಲಸಿಂದ, ನುಗ್ಗೇಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ವಿದ್ಯುತ್ ಕಂಬದಲ್ಲಿ ಲೈಟ್‍ಗಳನ್ನು ಅಳವಡಿಸಲಾಗಿದೆ. ಆದರೆ ಆನ್ ಮಾಡಬೇಕಿದೆ. ಗುಲಸಿಂದ ಹೊರತುಪಡಿಸಿ ಉಳಿದ ಕಡೆ ಕಾಮಗಾರಿ ಪೂರ್ಣಗೊಂಡಿದೆ. ಗುಲಸಿಂದ ಹೊರತುಪಡಿಸಿ ಉಳಿದ ಭಾಗದಲ್ಲಿ ಸದ್ಯದಲ್ಲಿ ಲೈಟ್‍ಗಳನ್ನು ಆನ್ ಮಾಡಲಾಗುವುದು’ ಎಂದರು.

ADVERTISEMENT

‘ಹಿರೀಸಾವೆಯಲ್ಲಿ ವಿದ್ಯುತ್ ವಿತರಣಾ ಕೇಂದ್ರದ ಬಳಿ ಕೇಬಲ್ ಮೇಲ್ಭಾಗದಲ್ಲಿ ಅಳವಡಿಸಲಾಗಿತ್ತು. ಅದನ್ನು ಈಗ ಅಂಡರ್ ಪಾಸ್‍ನಲ್ಲಿ ಅಳವಡಿಸಲಾಗುವುದು. ಅದೇರೀತಿ ದಿಡಗ ರಸ್ತೆಯ ವೃತ್ತದಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಬೇಕಿದೆ. ಹಿರೀಸಾವೆ, ಶ್ರವಣಬೆಳಗೊಳ ರಸ್ತೆಭಾಗ, ರಾಜಾಪುರ ಗೇಟ್, ಬ್ಯಾಡರಹಳ್ಳಿ, ಯಾಳನಹಳ್ಳಿ ಗೇಟ್, ದೊಡ್ಡೇರಿಕಾವಲು ಬಳಿ ಬಸ್ ಶೆಲ್ಟರ್‍ಗಳನ್ನು ರಾಷ್ಟ್ರೀಯ ಹೆದ್ದಾರಿ ವತಿಯಿಂದ ನಿರ್ಮಿಸಲಾಗುವುದು. ಇದಲ್ಲದೇ ಅವಶ್ಯಕತೆ ಇರುವ ಕಡೆ ಬಸ್ ಶೆಲ್ಟರ್ ನಿರ್ಮಿಸಬೇಕಿದೆ’ ಎಂದು ಹೇಳಿದರು.

‘ಗುಲಸಿಂದ ಬಳಿ ಬೆಂಗಳೂರು ಮಾರ್ಗದಿಂದ ಬಾಗೂರು ರಸ್ತೆಗೆ ಸಂಪರ್ಕ ಕಲ್ಪಿಸುವ 400 ಮೀಟರ್ ರಸ್ತೆ ನಿರ್ಮಿಸಬೇಕಿದೆ. ಅದೇ ರೀತಿ ಬಾಗೂರು ರಸ್ತೆಯಿಂದ ಹಾಸನದ ಕಡೆಗೆ ಸಂಪರ್ಕ ಕಲ್ಪಿಸುವ 500 ಮೀಟರ್ ರಸ್ತೆ ನಿರ್ಮಿಸಲಾಗುವುದು. ಸಾರ್ವಜನಿಕರಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ 3 ಕಡೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು’ ಎಂದು ಗುತ್ತಿಗೆದಾರರ ಗಮನಕ್ಕೆ ತಂದರು.

ಸೆಸ್ಕ್ ಮತ್ತು ಹೆದ್ದಾರಿ ಇಲಾಖೆ ಸಮನ್ವಯದಿಂದ ಕೆಲಸಮಾಡುವಂತೆ ತಿಳಿಸಲಾಗಿದೆ. ಇನ್ನು 20 ದಿನದ ಬಳಿಕ ಮತ್ತೊಮ್ಮೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಆರ್. ರತ್ನಾ, ಸಹಾಯಕ ತಾಂತ್ರಿಕ ಎಂಜಿನಿಯರ್ ಎನ್.ಆರ್. ಹರೀಶ್, ಕಿರಿಯ ಎಂಜಿನಿಯರ್ ವೆಂಕಟೇಶ್ ಗುತ್ತಿಗೆದಾರ ಸೋಮಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.