ADVERTISEMENT

ಜಿಲ್ಲಾಧಿಕಾರಿಗೆ ಗುಲಾಬಿ ನೀಡಿದ ಗುತ್ತಿಗೆ ನೌಕರರು

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 15:49 IST
Last Updated 29 ಡಿಸೆಂಬರ್ 2020, 15:49 IST
ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ನಗರಸಭೆ ಹೊರಗುತ್ತಿಗೆ ನೌಕರರು ಗುಲಾಬಿ ಹೂ ನೀಡಿದರು.
ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ನಗರಸಭೆ ಹೊರಗುತ್ತಿಗೆ ನೌಕರರು ಗುಲಾಬಿ ಹೂ ನೀಡಿದರು.   

ಹಾಸನ: ಎರಡನೇ ಹಂತದ ನಿವೇಶನ ಹಂಚಿಕೆ ವಿಳಂಬ, ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಗುಲಾಬಿ ನೀಡುವ ಮೂಲಕ ಮಂಗಳವಾರ ಪೌರಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರಸಭೆಯಲ್ಲಿ ನೇರ ಪಾವತಿ ಹಾಗೂ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಇತರೆ ಪೌರ ಕಾರ್ಮಿಕರು, ಒಳಚರಂಡಿ ಕೆಲಸಗಾರರು, ನೀರುಗಂಟಿಗಳು, ಆಟೊ ಹಾಗೂ ವಾಹನ ಚಾಲಕರನ್ನು ಕಾಯಂ ಮಾಡಬೇಕು. ಪೌರ ಕಾರ್ಮಿಕರ ಕುಟುಂಬಗಳಿಗೆ ಗೃಹ ಭಾಗ್ಯ ಯೋಜನೆಯಡಿ ಮೊದಲ ಹಂತದಲ್ಲಿ 43 ಮಂದಿಗೆ ಬೇಲೂರು ರಸ್ತೆಯಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಉಳಿದ 40 ಮಂದಿಗೆ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಒಂದುವರೆ ಕೋಟಿ ರೂಪಾಯಿ ಹಣ ಇದ್ದರೂ ಜಮೀನುಖರೀದಿಸಲು ಆಯುಕ್ತರುಮೀನಾಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಮೌಖಿಕ ಆದೇಶ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಗುತ್ತಿಗೆ ನೌಕರರಿಗೂ ನಿವೇಶನ ಒದಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಐನೂರು ಮಂದಿಗೆ ಒಬ್ಬ ಪೌರಕಾರ್ಮಿಕ ಇರಬೇಕು. ಆದರೆ ನಾಲ್ಕೂವರೆ ಸಾವಿರ ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕಇದ್ದಾರೆ. ನೀರುಗಂಟಿಗಳನ್ನು ಹೊರಗುತ್ತಿಗೆಯಿಂದ ಬಿಡುಗಡೆಗೊಳಿಸಿ ನಗರಸಭೆಯಿಂದಲೇ ವೇತನ ಪಾವತಿ ಮಾಡಬೇಕು. ಆಟೊ ಚಾಲಕರು ಹಾಗೂ ಯುಜಿಡಿ ಕೆಲಸ ಮಾಡುತ್ತಿರುವರನ್ನು ಸೇವಾ ಹಿರಿತನದ ಆಧಾರದ ಮೇಲೆ ಕಾಯಂ ಗೊಳಿಸಿ ವಿಶೇಷ ಸೌಲಭ್ಯ ಕಲ್ಪಿಸಬೇಕು. ಪೌರ ಕಾರ್ಮಿಕರ ಸಮವಸ್ತ್ರದ ಬಿಲ್ ಬಾಕಿ ಉಳಿದಿದ್ದು, ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್‌.ಗಿರೀಶ್, ಪೌರಕಾರ್ಮಿಕರ ಸಮಸ್ಯೆ ಹಾಗೂ ನಿವೇಶನ ಹಂಚಿಕೆ ಕುರಿತು ಶೀಘ್ರ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು.

ಪೌರ ಕಾರ್ಮಿಕ ಸಂಘದ ಸಂಘಟನಾ ಕಾರ್ಯದರ್ಶಿ ಮಾರ, ಕಾರ್ಯದರ್ಶಿ ಪರಶುರಾಮ್, ಗೌರವಾಧ್ಯಕ್ಷ ನಾಗರಾಜ್ ಹೆತ್ತೂರು, ನೀರುಗುಂಟಿಗಳ ಸಂಘದ ಅಧ್ಯಕ್ಷ ಆನಂದ್, ವಾಹನ ಚಾಲಕರ ಸಂಘದ ಅಧ್ಯಕ್ಷ ಧರ್ಮ, ಯುಜಿಡಿ ವಿಭಾಗದ ರಜನಿ, ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಕೃಷ್ಣದಾಸ್, ಬ್ಯಾಂಕ್ ಶಿವಣ್ಣ, ಆರ್.ಪಿ.ಐ ಸತೀಶ್, ಬೆಳಗೋಡು‌ ಬಸವರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.