ಶ್ರವಣಬೆಳಗೊಳ: ಹೋಬಳಿಯ ದಮ್ಮನಿಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಡಿ.ಜೆ.ರಾಮಕೃಷ್ಣ ಅಧ್ಯಕ್ಷರಾಗಿ, ಐ.ಕೆ.ಪುಷ್ಪ ರಾಮಕೃಷ್ಣಾಚಾರ್ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷ ಕೆ.ಆರ್.ಅನಂತ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.ಜೆ.ರಾಮಕೃಷ್ಣ ಹಾಗೂ ಖಾಲಿ ಇದ್ದ ಉಪಾಧ್ಯಕ್ಷ ಸ್ಥಾನಕ್ಕೆ ಐ.ಕೆ.ಪುಷ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಲೂಕು ಪಂಚಾಯ್ತಿ ಇಒ ಹರೀಶ್ ಅವಿರೋಧ ಆಯ್ಕೆ ಪ್ರಕಟಿಸಿದರು.
ನೂತನ ಅಧ್ಯಕ್ಷ ಡಿ.ಜೆ.ರಾಮಕೃಷ್ಣ ಅವಿರೋಧ ಆಯ್ಕೆಗೆ ಸಹಕರಿಸಿದ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಎಲ್ಲ ಸದಸ್ಯರಿಗೆ ಧನ್ಯವಾದ ಸಲ್ಲಿಸಿ, ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇವೆ. ಎಲ್ಲಾ ಸದಸ್ಯರ ಪರಸ್ಪರ ಸಹಕಾರದಿಂದ ಉತ್ತಮ ಕೆಲಸ ನಿರ್ವಹಿಸುವುದರೊಂದಿಗೆ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಶ್ರಮಿಸುತ್ತೇವೆ ಎಂದು ಹೇಳಿದರು.
ಕುಡಿಯುವ ನೀರು, ರಸ್ತೆ, ಬೀದಿ ದೀಪ, ಒಳಚರಂಡಿ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಿ ಮಾದರಿ ಗ್ರಾಮ ಪಂಚಾಯ್ತಿಯನ್ನಾಗಿ ರೂಪಿಸಲು ನಾವು ಬದ್ಧ. ಗ್ರಾಮಾಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಅಧ್ಯಕ್ಷ ಕೆ.ಆರ್.ಅನಂತ, ಸದಸ್ಯರಾದ ಭವ್ಯ ಚಂದ್ರಶೇಖರ್, ಎ.ಎಸ್.ಮೋಹನ್ ಕುಮಾರ್, ಕೆ.ಎಂ.ಶಂಕರ್, ಎಚ್.ಕೆ. ಬಲರಾಮ್, ಅಬ್ದುಲ್ ಗಪೂರ್, ಭವ್ಯ ಪ್ರಕಾಶ್, ಕಲ್ಯಾಣಮ್ಮ ನಂಜಪ್ಪ, ಶಕುಂತಲಾ ದೇವರಾಜ್, ಗಾಯತ್ರಿ ಎಸ್. ಶೇಖರ್, ಸಾವಿತ್ರಿ ರುಕ್ಕೇಶ್, ಮಾಜಿ ಸದಸ್ಯೆ ರಕ್ಷಿತಾ ನಿಂಗರಾಜು, ಮುಖಂಡರಾದ ಶಿಲ್ಪ ಶ್ರೀನಿವಾಸ್, ಮೀನಾಕ್ಷಿ ಬಸವರಾಜ್, ಶಿವರಾಮ್, ಕುಮಾರ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಡಿ.ಎಂ.ರವಿ, ವಿರೂಪಾಕ್ಷ, ನಾಗರಾಜ್, ಡಿ.ಆರ್.ಶಿವರಾಜ್, ರಮೇಶ್, ಡಿ.ಎನ್.ರಾಜು, ಉಪನ್ಯಾಸಕ ಮಂಜುನಾಥ್, ಡಿ.ಎನ್.ಪ್ರಶಾಂತ್, ಡಿ.ಆರ್.ಸಂತೋಷ್, ಎಸ್.ಕೆ.ಎಂ.ಸತೀಶ್, ಜಗದೀಶ್, ರುದ್ರೇಶ್, ರಘು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.