ADVERTISEMENT

ಅದ್ಧೂರಿ ಅನಂತನಾಥ ಸ್ವಾಮಿ ಸ್ವರ್ಣ, ಬೆಳ್ಳಿ ರಥೋತ್ಸವ

ಶ್ರವಣಬೆಳಗೊಳದಲ್ಲಿ ವೈಭವದ ಶೋಭಾಯಾತ್ರೆ, ದಶಲಕ್ಷಣ ಮಹಾಪರ್ವ ಸಮಾರೋಪ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 11:36 IST
Last Updated 14 ಸೆಪ್ಟೆಂಬರ್ 2019, 11:36 IST
ಶ್ರವಣಬೆಳಗೊಳ ದಶಲಕ್ಷಣ ಪರ್ವದ ಸಮಾರೋಪ ಸಮಾರಂಭದ ನಿಮಿತ್ತ ಅನಂತನಾಥ ತೀರ್ಥಂಕರರ, ಚವ್ವೀಸ್ ತೀರ್ಥಂಕರರ ಸ್ವರ್ಣ ಮತ್ತು ಬೆಳ್ಳಿ ರಥೋತ್ಸವದ ವೈಭವದ ಶೋಭಾಯಾತ್ರೆ ನಡೆಯಿತು. ಪುಣ್ಯಸಾಗರ ಮಹಾರಾಜರು,ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕ ಸಿ.ಎನ್‌.ಬಾಲಕೃಷ್ಣ ಇದ್ದರು
ಶ್ರವಣಬೆಳಗೊಳ ದಶಲಕ್ಷಣ ಪರ್ವದ ಸಮಾರೋಪ ಸಮಾರಂಭದ ನಿಮಿತ್ತ ಅನಂತನಾಥ ತೀರ್ಥಂಕರರ, ಚವ್ವೀಸ್ ತೀರ್ಥಂಕರರ ಸ್ವರ್ಣ ಮತ್ತು ಬೆಳ್ಳಿ ರಥೋತ್ಸವದ ವೈಭವದ ಶೋಭಾಯಾತ್ರೆ ನಡೆಯಿತು. ಪುಣ್ಯಸಾಗರ ಮಹಾರಾಜರು,ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕ ಸಿ.ಎನ್‌.ಬಾಲಕೃಷ್ಣ ಇದ್ದರು   

ಶ್ರವಣಬೆಳಗೊಳ: ‘ದಶಲಕ್ಷಣ ಮಹಾಪರ್ವದ 10 ದಿನಗಳ ಕಾಲವೂ ಕ್ಷೇತ್ರದಲ್ಲಿ ಪುಣ್ಯಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಅಭೂತಪೂರ್ವ ಧರ್ಮ ಪ್ರಭಾವನೆಯಾಗಿದೆ’ ಎಂದು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ದಶಲಕ್ಷಣ ಮಹಾಪರ್ವದ ಸಮಾರೋಪ ಸಮಾರಂಭದ ನಿಮಿತ್ತ ಅನಂತನಾಥ ತೀರ್ಥಂಕರರ, ಚವ್ವೀಸ್ ತೀರ್ಥಂಕರರ ಸ್ವರ್ಣ ಮತ್ತು ಬೆಳ್ಳಿ ರಥೋತ್ಸವದ ವೈಭವದ ಶೋಭಾಯಾತ್ರೆ ಚಾಲನೆಗೊಂಡ ಸಂದರ್ಭದಲ್ಲಿ ಅವರು ಮಾತನಾಡಿ, ‘ಆದರ್ಶ ವ್ಯಕ್ತಿತ್ವ ಹೊಂದಿರುವ ಇಲ್ಲಿಯ ಶಾಸಕರು ಕ್ಷೇತ್ರದಲ್ಲಿ ನಡೆಯುವ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಹಕಾರ ನೀಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಭವ್ಯ ಶೋಭಾಯಾತ್ರೆಗೆ ಶಾಸಕ ಸಿ.ಎನ್‌.ಬಾಲಕೃಷ್ಣ ಚಾಲನೆ ನೀಡಿ, ‘ಪ್ರಪಂಚದಾದ್ಯಂತ ದಶಲಕ್ಷಣ ಮಹಾಪರ್ವ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿ, ಸ್ವಚ್ಛನಗರಿಯನ್ನಾಗಿ ಪರಿವರ್ತಿಸುವ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು’ ಎಂದು ಹೇಳಿದರು.

ADVERTISEMENT

ಅನಂತನಾಥ ಸ್ವಾಮಿ ವ್ರತಿಕರು ಪಾಲ್ಗೊಂಡಿದ್ದ ಈ ಭವ್ಯ ಶೋಭಾಯಾತ್ರೆಯಲ್ಲಿ ಸ್ವರ್ಣ ರಥದಲ್ಲಿ ಚವ್ವೀಸ್ ತೀರ್ಥಂಕರರು, ಬೆಳ್ಳಿ ರಥದಲ್ಲಿ ಹೂವಿನಿಂದ ಅಲಂಕರಿಸಲ್ಪಟ್ಟ 14ನೇ ತೀರ್ಥಂಕರ ಅನಂತನಾಥಸ್ವಾಮಿ, ಕುದುರೆ ಬ್ರಹ್ಮದೇವರು, ಬೆಳ್ಳಿ ಪಲ್ಲಕ್ಕಿಯಲ್ಲಿ ಶಾಸ್ತ್ರ, 24 ತೀರ್ಥಂಕರರಾದ ವೃಷಭಾದಿ ಮಹಾವೀರರವರೆಗಿನ ಲಾಂಛನಗಳ ಪಟ, ಪ್ರಭಾವನಾ ರಥ, ಪಂಚರಂಗಿ ಧರ್ಮಧ್ವಜಗಳನ್ನು ಹಿಡಿದ ಬಾಲಕರು, ಕಳಸ ಹೊತ್ತ ಮಹಿಳೆಯರು, ಮಂಗಲವಾದ್ಯ, ಚಿಟ್ಟಿಮೇಳ ಇದ್ದು, ಮೈಸೂರು ಬ್ಯಾಂಡ್‌ಸೆಟ್‌ಗೆ ಹೆಜ್ಜೆ ಹಾಕಿದ ಶ್ರಾವಕ– ಶ್ರಾವಕಿಯರು, ಜಯಘೋಷಗಳನ್ನು ಮೊಳಗಿಸಿದಾಗ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರು ಕಣ್ತುಂಬಿಕೊಂಡರು. ಈ ಶೋಭಾಯಾತ್ರೆಯು ಜೈನ ಮಠದಿಂದ ಹೊರಟು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಚಾವುಂಡರಾಯ ಸಭಾ ಮಂಟಪಕ್ಕೆ ಬಂದು ಸೇರಿತು.

ವೃಷಭಾದಿ ಮಹಾವೀರರವರೆಗಿನ ಚವ್ವೀಸ್ ತೀರ್ಥಂಕರರು, ಭರತ ಬಾಹುಬಲಿ ಇರುವ ಸ್ವರ್ಣರಥದಲ್ಲಿ ಪಟ್ಟಣದ ಶ್ರೇಯಸ್‌ ಮತ್ತು ಪ್ರತೀತ ದಂಪತಿ ಚಾಮರಧಾರಿಗಳಾಗಿ ಭಾಗವಹಿಸಿದ್ದರು.

ಶೋಭಾಯಾತ್ರೆಯಲ್ಲಿ ಪುಣ್ಯಸಾಗರ ಮಹಾರಾಜರು ಕ್ಷುಲ್ಲಿಕಾ ವಿಶುದ್ಧಮತಿ ಮಾತಾಜಿ, ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ರಮೇಶ್‌, ಬೆಂಗಳೂರಿನ ಕೆ.ಜೆ.ಎ ಅಧ್ಯಕ್ಷ ಎಸ್‌.ಜಿತೇಂದ್ರಕುಮಾರ್‌, ಹಾಸನ ಜೈನ ಸಮಾಜದ ಅಧ್ಯಕ್ಷ ಎಂ.ಅಜಿತ್‌ಕುಮಾರ್‌, ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಎಚ್‌.ಪಿ.ಅಶೋಕ್‌ಕುಮಾರ್‌, ಜಿ.ಬಿ.ದೇವೇಂದ್ರಕುಮಾರ್‌, ಪ್ರೊ.ಜೀವೇಂದ್ರಕುಮಾರ್‌ ಹೊತಪೇಟೆ, ಪ್ರೊ.ನ್ಯಾಮಗೌಡ, ಪೂರ್ಣಿಮಾ ಅನಂತಪದ್ಮನಾಭ್‌, ಜಿ.ಪಿ.ಪದ್ಮಕುಮಾರ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.