ADVERTISEMENT

ಕಾಡಾನೆ ಸಮಸ್ಯೆಗೆ ರೈಲ್ವೆ ಬ್ಯಾರಿಕೇಡ್ ಬೇಡ: ವಿಕ್ರಂ ಗೌಡ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 16:28 IST
Last Updated 29 ನವೆಂಬರ್ 2022, 16:28 IST

ಹಾಸನ: ಕಾಡಾನೆಗಳ ವಾಸ ಸ್ಥಳವಾದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಮರಳು, ಕಲ್ಲು ಗಣಿಗಾರಿಕೆ ನಿಲ್ಲಿಸುವುದು ಸೂಕ್ತ ಎಂದು ಕಾಡಾನೆ ಸಂರಕ್ಷಣಾ ಸಂಘದ ಅಧ್ಯಕ್ಷ ವಿಕ್ರಂ ಗೌಡ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆಗಳ ಮೀಸಲು ಅರಣ್ಯ ಪ್ರದೇಶವಿರುವ ಆಲೂರು, ಬೇಲೂರು, ಸಕಲೇಶಪುರ ಭಾಗದಲ್ಲಿ ಅಕ್ರಮ ಗಣಿಗಾರಿಕೆಯಿಂದ ಭಾರಿ ಸಿಡಿಮದ್ದು ಸ್ಪೋಟದ ಶಬ್ದ ಆಗುತ್ತಿದ್ದು, ಇದರಿಂದ ಆನೆಗಳು ವಿಚಲಿತ ಆಗುತ್ತಿವೆ. ಇದರಿಂದಲೇ ಆನೆಗಳು ಕಾಡನ್ನು ಬಿಟ್ಟು ನಾಡಿಗೆ ಬರುತ್ತಿವೆ ಎಂದರು.

ಕಾಡಾನೆಗಳು ನೀರು ಕುಡಿಯಲು ಬರುವ ನದಿ ದಂಡೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ಆನೆಗಳಿಗೆ ಸಂಕಷ್ಟ ಎದುರಾಗಿದೆ. ರಾತ್ರಿ ವೇಳೆ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆಯಿಂದ ಆನೆಗಳಿಗೆ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ, ಬಹುತೇಕ ಹಾಲಿ, ಮಾಜಿ ಶಾಸಕರು ಮತ್ತು ಜನಪ್ರತಿನಿಧಿಗಳು ಗಣಿಗಾರಿಕೆಯಲ್ಲಿ ತೊಡಗಿದ್ದು, ಈ ಕಾರಣದಿಂದಲೇ ಗಣಿಗಾರಿಕೆ ನಿಲ್ಲಿಸಲು ಮುಂದಾಗುತ್ತಿಲ್ಲ ಎಂದು ದೂರಿದರು.

ADVERTISEMENT

ರೈಲುಗಳಿಗೆ ಸಿಲುಕಿ ಕಾಡಾನಗಳು ಸಾಯುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ, ರೈಲು ಹಳಿಗಳು ಹಾದು ಹೋಗುವ ಅರಣ್ಯ ಪ್ರದೇಶಗಳಲ್ಲಿ ಬೇಲಿ ನಿರ್ಮಾಣ ಮಾಡಬೇಕಿರುವ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಇದರಿಂದ ಕಾಳಿಂಗ ಸರ್ಪ, ಜಿಂಕೆ, ಹಂದಿ, ಕಾಡುಕೋಣ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ಸಾಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಇಲಾಖೆ ಕೆಲವೆಡೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿದ್ದು, ಇದನ್ನು ವಿಸ್ತರಿಸಲು ಮುಂದಾಗಿದೆ. ಇದು ಒಳ್ಳೆಯ ಬೆಳೆವಣಿಗೆ ಅಲ್ಲ, ಇದರಿಂದ ಆನೆಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ. ಸರಕಾರ ಈ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕು. ಬ್ಯಾರಿಕೇಡ್ ತೆರವು ಮಾಡಬೇಕು ಎಂದು ಒತ್ತಾಯಿಸಿದರು.

‘ಹಲವು ವರ್ಷಗಳಿಂದ ಪರಿಸರಕ್ಕೆ ಪೂರಕ ಹಾಗೂ ಆನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇನೆ, ಜೀವದ ಹಂಗು ತೊರೆದು ಆನೆಗಳ ಸಂರಕ್ಷಣೆಗೆ ಕೆಲಸ ಮಾಡುತ್ತಿರುವ ನಮ್ಮ ಬಗ್ಗೆ ಕೆಲವರು ಮನಬಂದಂತೆ ಮಾತನಾಡುತ್ತಿದ್ದಾರೆ. ಇದನ್ನು ಬಿಡಬೇಕು. ಅಧಿಕಾರಿಗಳು ನಮ್ಮ ಸಹಕಾರ ಬೇಕಾದಾಗ ಪಡೆದುಕೊಂಡು ಮತ್ತೆ ನಮ್ಮನ್ನೇ ದೂರುವ ಕೆಲಸ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಕಾಗೋಷ್ಠಿಯಲ್ಲಿ ಸುಧೀರ್ ಹುರುಡಿ, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.