
ಬಾಗೂರು(ನುಗ್ಗೇಹಳ್ಳಿ): ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನದಿಂದ ರೈತರ ಅಭಿವೃದ್ಧಿ ಸಾಧ್ಯ. ಕೆರೆಕಟ್ಟೆಗಳನ್ನು ತುಂಬಿಸುವುದರಿಂದ ರೈತರ ಬದುಕು ಹಸನಾಗಲಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಹೋಬಳಿಯ ಮಾದಗುಡ್ಡನಹಳ್ಳಿ ಗ್ರಾಮದಲ್ಲಿ ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಾರ್ವಜನಿಕ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಬಾಗೂರು ಹೋಬಳಿಯ ಎಂ. ಶಿವರ, ಕೆಂಬಾಳು, ನುಗ್ಗೇಹಳ್ಳಿ ಹೋಬಳಿಯ ತಗಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 20ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗಿದೆ. ಗ್ರಾಮದ ಕೆರೆಗೂ ಈ ಯೋಜನೆ ಮೂಲಕ ನೀರು ಹರಿಸಲಾಗಿದೆ. ಸಣ್ಣಪುಟ್ಟ ಅಡೆತಡೆಗಳಿಂದ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಲು ಸಾಧ್ಯವಾಗಿಲ್ಲ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿದರೆ ಗ್ರಾಮದ ಕೆರೆಗೆ ಮೊದಲ ಆದ್ಯತೆ ನೀಡಿ ನೀರು ಹರಿಸಲಾಗುವುದು ಎಂದರು.
ಗ್ರಾಮದ ಲಕ್ಷ್ಮೀದೇವಿ ದೇವಾಲಯ ಜೀರ್ಣೋದ್ಧಾರಕ್ಕೆ ಈಗಾಗಲೇ ₹10 ಲಕ್ಷ ಅನುದಾನ ನೀಡಲಾಗಿದ್ದು, ಸಮಾಜ ಸೇವಕ ವೈಯಕ್ತಿಕವಾಗಿ ₹2 ಲಕ್ಷ ನೀಡಿದ್ದಾರೆ. ಇನ್ನು ಹೆಚ್ಚಿನ ಸಹಾಯ ಮಾಡಲಾಗುವುದು ಎಂದರು.
ಗ್ರಾಮದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿದ್ದು, ಗ್ರಾಮಸ್ಥರು ಮದುವೆ ಸೇರಿದಂತೆ ಅನೇಕ ಕಾರ್ಯಕ್ರಮ ನಡೆಸಬಹುದಾಗಿದೆ. ಜೊತೆಗೆ ಸಮುದಾಯ ಭವನ ನಿರ್ವಹಣೆಗೆ ಗ್ರಾಮಸ್ಥರು ಯೋಜನೆ ರೂಪಿಸುವಂತೆ ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್. ಶಿವಣ್ಣ, ಉದ್ಯಮಿ ಅಣತಿ ಯೋಗೀಶ್ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮರಿದೇವ ಗೌಡ, ಮಾಜಿ ಸದಸ್ಯ ಓಬಳಾಪುರ ಬಸವರಾಜ್, ಗ್ರಾಂ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮೀ ಬೂದೇಶ್, ಉಪಾಧ್ಯಕ್ಷ ಎಂ. ಶಿವರ ರಾಜು, ಕೃಷಿ ಪತ್ತಿನ ಸಂಘದ ಅಧ್ಯಕ್ಷ ವೆಂಕಟರಾಮು, ಮುಖಂಡರಾದ ಹುಲಿಕೆರೆ ಸಂಪತ್ ಕುಮಾರ್, ಗೋವಿನಕೆರೆ ರಾಮು, ನಂಜೇಶ್, ರಂಗೇಗೌಡ, ಶಂಕ್ರಣ್ಣ, ಮಧು, ಎಂಜಿನಿಯರ್ ಕಾಶಿನಾಥ್, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.