ADVERTISEMENT

ದಾರಿ ತಪ್ಪಲು ಅವಕಾಶ ನೀಡಬೇಡಿ

ಪೋಷಕರಿಗೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 14:28 IST
Last Updated 21 ಜೂನ್ 2019, 14:28 IST
ಹಾಸನದಲ್ಲಿ ಆದಿಚುಂಚನಗಿರಿ ಮಠದದಲ್ಲಿ ಏರ್ಪಡಿಸಿದ್ದ ಜ್ಞಾನಾಂಕುರ (ಅಕ್ಷರಾಭ್ಯಾಸ) ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಪಾಲ್ಗೊಂಡಿದ್ದರು.
ಹಾಸನದಲ್ಲಿ ಆದಿಚುಂಚನಗಿರಿ ಮಠದದಲ್ಲಿ ಏರ್ಪಡಿಸಿದ್ದ ಜ್ಞಾನಾಂಕುರ (ಅಕ್ಷರಾಭ್ಯಾಸ) ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಪಾಲ್ಗೊಂಡಿದ್ದರು.   

ಹಾಸನ: ಮಕ್ಕಳು ದಾರಿ ತಪ್ಪಲು ಪೋಷಕರು ಅವಕಾಶ ನೀಡಬಾರದು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಬಿಜಿಎಸ್ ಶಾಖಾ ಮಠದಲ್ಲಿ ಏರ್ಪಡಿಸಿದ್ದ ಜ್ಞಾನಾಂಕುರ (ಅಕ್ಷರಾಭ್ಯಾಸ) ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

‘ಮಕ್ಕಳು ನಮ್ಮ ಬದುಕಿನ ಶಕ್ತಿ. ಅವರನ್ನು ಪಾಲನೆ, ಪೋಷಣೆ ಮಾಡುವುದು ಅತಿಮುಖ್ಯ. ಅಪ್ಪ, ಅಮ್ಮ ತಪ್ಪು ಮಾಡಿದರೆ ಅದು ಮಕ್ಕಳು ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಶಾಲೆಯಲ್ಲಿ ಶಿಕ್ಷಕರು ಉದ್ದಾರ ಮಾಡುತ್ತಾರೆ ಅಂದುಕೊಂಡು ಸುಮ್ಮನೆ ಇರಬಾರದು. ಪ್ರೀತಿಯಿಂದ ವಿದ್ಯೆ ಕಲಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಪೋಷಕರು ಕೆಲ ಹೊತ್ತು ಬೋಧಕರಾಗಿ ಪಾತ್ರ ನಿರ್ವಹಿಸಿದ್ದನ್ನು, ಅಭಿನಯ ಮಾಡಿದ್ದನ್ನು ಪ್ರಶಂಸಿಸಿದ ಸ್ವಾಮೀಜಿ, ಧಾರಾವಾಹಿ ಅಥವಾ ಸಿನಿಮಾದಲ್ಲಿ ಅಭಿನಯಿಸುವುದುಸುಲಭ. ಆದರೆ ನಿಜ ಜೀವನದಲ್ಲಿ ಅಭಿನಯ ಕಷ್ಟ ಎಂದು ಅಭಿಪ್ರಾಯಪಟ್ಟರು.

ತಾಯಿ ನಕ್ಕರೆ ಮನೆಯೂ ನಗುತ್ತದೆ. ತಾಯಿ ಅತ್ತರೆ ಇಡೀ ಮನೆಯೇ ಅಳುತ್ತದೆ. ಈ ದೃಷ್ಟಿಯಂದ ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ. ಪ್ರಕೃತಿ ಸಮಾನಳಾದ ತಾಯಿಗೆ ಭಗವಂತನ ಶಕ್ತಿ ಇರಲಿ ಎಂದು ಪ್ರಾರ್ಥಿಸಿದರು.

‘ಯಾವುದೇ ಪುಣ್ಯದ ಕೆಲಸ ಮಾಡುವ ಮುನ್ನ ಓಂ ಸ್ತುತಿ ಮಾಡಲಾಗುತ್ತದೆ. ಓಂ ಅನ್ನೋದು ಒಂದು ಧರ್ಮ ಅಥವಾ ಸಂಪ್ರದಾಯಕ್ಕೆ ಸೇರಿದ್ದಲ್ಲ. ಇದಕ್ಕೆ ಚೈತನ್ಯವಾದ, ಅಗೋಚರವಾದ ಶಕ್ತಿ ಇದೆ. ಅದೇ ದೇವರು. ದೇವರನ್ನು ಒಂದೊಂದು ಧರ್ಮವರು ಒಂದೊಂದು ರೀತಿ ಕರೆದುಕೊಂಡರು. ಆದರೆ ಭಾಷೆ ಬದಲಾದರೂ ಭಾವನೆ ಬದಲಾಗುವುದಿಲ್ಲ’ ಎಂದು ನುಡಿದರು.

ವಿಘ್ನ ನಿವಾರಕ ಗಣಪತಿ ಓಂಕಾರದ ಶಕ್ತಿ ರೂಪ. ಗಣಪತಿಗೆ ಬೇರೆ ಬೇರೆ ಆಕಾರ ಕೊಟ್ಟಿದ್ದರೂ, ಒಂದೊಂದು ಆಕಾರಕ್ಕೂ ಒಂದೊಂದು ಅರ್ಥವಿದೆ. ಹೀಗಾಗಿ ಮಕ್ಕಳಿಗೆ ಓಂಕಾರದ ಮೂಲಕ ಜ್ಞಾನದ ಉಪಾಸನೆ ಅಂಕುರವಾಗುವಂತೆ ಮಾಡುವ ಕಾರ್ಯಕ್ರಮವಿದು ಎಂದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ಧಾರ್ಮಿಕ ಕೇಂದ್ರಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮ ವಹಿಸುತ್ತಿರುವುದು ಶ್ಲಾಘನೀಯ ವಿಚಾರ. ಆದಿಚುಂಚನಗಿರಿ ಸಂಸ್ಥೆಯಲ್ಲಿ ವಿದ್ಯೆ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ತರ ಸ್ಥಾನಕ್ಕೆ ಏರಿದ್ದಾರೆ. ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ಬೆಳೆಸುವ ಜವಾಬ್ದಾರಿ ಪಾಲಕರದ್ದಾಗಿದೆ ಎಂದರು.

ಪೊಲೀಸ್‌ ವರಿಷ್ಠಾಧಿಕಾರಿ ಎ.ಎನ್. ಪ್ರಕಾಶ್‍ಗೌಡ ಮಾತನಾಡಿದರು. ಶಾಖಾ ಮಠದ ಶಂಭುನಾಥ ಸ್ವಾಮೀಜಿ, ರಾಮನಗರದ ಅನ್ನದಾನೇಶ್ವರ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ, , ಉಪವಿಭಾಗಾಧಿಕಾರಿ ಎಚ್.ಲ್. ನಾಗರಾಜ್, ಹಾಸನ ಹಾಲು ಒಕ್ಕೂಟ ವ್ಯವಸ್ಥಾಪಕ ಗೋಪಾಲ್, ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಎಚ್.ಬಿ ಮದನಗೌಡ, ಆದಿಚುಂಚನಗಿರಿ ಮಠದ ವ್ಯವಸ್ಥಾಪಕ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.