ADVERTISEMENT

ಶಿಥಿಲ ಕಟ್ಟಡ: ಜೀವಭಯದಲ್ಲೇ ನಿತ್ಯ ಕೆಲಸ

ದುರಸ್ತಿಗೊಳ್ಳದ, ಸ್ಥಳಾಂತರಗೊಳ್ಳದ ಕಚೇರಿನುಗ್ಗೇಹಳ್ಳಿಯ ಉಪ ನೋಂದಣಾಧಿಕಾರಿ ಕಚೇರಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 10:14 IST
Last Updated 8 ನವೆಂಬರ್ 2019, 10:14 IST
ನುಗ್ಗೇಹಳ್ಳಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿ (ಎಡಚಿತ್ರ) ಮೈನ್ ಸ್ವಿಚ್‌ಗಳ ಬಳಿ ಗೋಡೆ ಶಿಥಲಗೊಂಡಿದ್ದು ಅಲ್ಲೇ ದಾಖಲೆ ಪತ್ರಗಳನ್ನು ಜೋಡಿಸಿ ಇಡಲಾಗಿದೆ
ನುಗ್ಗೇಹಳ್ಳಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿ (ಎಡಚಿತ್ರ) ಮೈನ್ ಸ್ವಿಚ್‌ಗಳ ಬಳಿ ಗೋಡೆ ಶಿಥಲಗೊಂಡಿದ್ದು ಅಲ್ಲೇ ದಾಖಲೆ ಪತ್ರಗಳನ್ನು ಜೋಡಿಸಿ ಇಡಲಾಗಿದೆ   

ನುಗ್ಗೇಹಳ್ಳಿ: ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಯು ಅವ್ಯವಸ್ಥೆಗಳ ಆಗರವಾಗಿದ್ದು ನಿತ್ಯವೂ ಸಿಬ್ಬಂದಿ, ಸಾರ್ವಜನಿಕರು ಪರದಾಡುವಂತಾಗಿದೆ.

ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು ನೌಕರರು ನಿತ್ಯವೂ ಜೀವಭಯದಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಚಾವಣಿಯ ಗಾರೆ ಉದುರಿತ್ತಿದ್ದು, ಹಲವು ಬಾರಿ ಕಂಪ್ಯೂಟರ್‌, ಪ್ರಿಂಟರ್‌ ಮೇಲೂ ಬಿದ್ದು ಕೆಲಸ ಸ್ಥಗಿತಗೊಂಡಿರುವ ನಿದರ್ಶನಗಳಿವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಇಲ್ಲಿನ ಸಿಬ್ಬಂದಿ.

70 ವರ್ಷಗಳ ಹಿಂದೆ ಈ ಕಟ್ಟಡವನ್ನು ನಿರ್ಮಾಣಗೊಂಡಿದ್ದು, 1947ರಿಂದಲೂ ಇಲ್ಲಿ ಇಂಡೆಕ್ಸ್ ಇ.ಸಿ, ನೋಂದಣಿ ನಡೆಯುತ್ತಿದೆ. ಈ ಕಚೇರಿ ವ್ಯಾಪ್ತಿಗೆ ಬಾಗೂರು ಹೋಬಳಿ, ಹಿರೀಸಾವೆ ಹೋಬಳಿ ಸುಮಾರು 210 ಹಳ್ಳಿಗಳು ಬರುತ್ತವೆ. ದಿನನಿತ್ಯ ಹತ್ತಾರು ರೈತರು ಇಲ್ಲಿಗೆ ವಿವಿಧ ಕೆಲಸಗಳಿಗೆ ಬರುತ್ತಾರೆ.

ADVERTISEMENT

ಮಳೆಗಾಲದಲ್ಲಿ ಚಾವಣಿ ಸೋರುವುದರಿಂದ ರೈತರ ಜಮೀನಿನ ದಾಖಲೆಗಳು ನೀರಿನಲ್ಲಿ ನೆಂದು ಹಾಳಾಗುತ್ತಿವೆ‌. ಕಚೇರಿ ನಿರ್ವಹಣೆಗೆ ನೀಡಿರುವ ಯು.ಪಿ.ಎಸ್ ಕೂಡಾ 6 ತಿಂಗಳಿಂದ ಕೆಟ್ಟುನಿಂತಿದೆ. ಇದರಿಂದ ವಿದ್ಯುತ್ ವ್ಯತ್ಯಯವಾದಾಗ ತುಂಬಾ ತೊಂದರೆಯಾಗುತ್ತಿದೆ. ವಿದ್ಯುತ್ ಮೈನ್‌ ಸ್ವಿಚ್‌ ಅಳವಡಿಸಿರುವಲ್ಲಿ ಗೋಡೆ ಶೀತಗೊಂಡಿದ್ದು ಯಾವಾಗ ಬೇಕಾದರೂ ಅವಘಡ ಸಂಭವಿಸುವ ಸಾಧ್ಯತೆ ಇದೆ.

’ಜಿಲ್ಲಾ ನೋಂದಣಾಧಿಕಾರಿ ಶ್ರೀನಿಧಿ ಅವರಿಗೂ ಕಚೇರಿಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿ ತಾತ್ಕಾಲಿಕವಾಗಿ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೂ ಮನವಿ ಮಾಡಿದ್ದು ಸಧ್ಯದಲ್ಲೇ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ವಿಶ್ವಾಸವಿದೆ‘ ಎಂದು ಇಲ್ಲಿನ ಉಪನೋಂದಣಿ ಅಧಿಕಾರಿ ಪ್ರಮೀಳಾ ಹೇಳಿದರು.

‘ನುಗ್ಗೇಹಳ್ಳಿ ಉಪನೋಂದಣಾ ಧಿಕಾರಿ ಕಚೇರಿ ಸಂಪೂರ್ಣ ಶಿಥಿಲ ಗೊಂಡಿರುವ ಬಗ್ಗೆ ವರದಿ ಬಂದಿದ್ದು ಈ ಬಗ್ಗೆ ರಾಜ್ಯ ಮುದ್ರಣ ನೋಂದಣಿ ಆಯುಕ್ತರಾದ ತ್ರಿಲೋಕಚಂದ್ರ ಅವರಿಗೆ ವರದಿ ನೀಡಿದ್ದೇವೆ. ಹೊಸ ಕಟ್ಟಡ ನಿರ್ಮಾಣ ಆಗುವವ ವರೆಗೂ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುವುದು‘ ಎಂದು ಜಿಲ್ಲಾ ನೊಂದಣಾಧಿಕಾರಿ ಶ್ರೀನಿಧಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.