ADVERTISEMENT

ಹಾಸನ | ಆತ್ಮವಿಶ್ವಾಸದೊಂದಿಗೆ ಪ್ರಯತ್ನಿಸಿ: ಮಹಾಲಿಂಗಯ್ಯ

ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾಕೂಟ ಆರಂಭ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 13:32 IST
Last Updated 29 ಸೆಪ್ಟೆಂಬರ್ 2022, 13:32 IST
ಹಾಸನದಲ್ಲಿ ಗುರುವಾರ ಆರಂಭವಾದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹಾಲಿಂಗಯ್ಯ ಸಿ.ಎಂ. ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಹಾಸನದಲ್ಲಿ ಗುರುವಾರ ಆರಂಭವಾದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹಾಲಿಂಗಯ್ಯ ಸಿ.ಎಂ. ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು.   

ಹಾಸನ: ಆತ್ಮವಿಶ್ವಾಸದೊಂದಿಗೆ ಪ್ರಾಮಾಣಿಕ ಪರಿಶ್ರಮ ಮತ್ತು ಸತತ ಪ್ರಯತ್ನಗಳು ಜೊತೆಗೂಡಿದರೆ ಗೆಲುವು ದೊರೆಯುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಹಾಲಿಂಗಯ್ಯ ಸಿ.ಎಂ. ಹೇಳಿದರು.

ನಗರದ ಪೆನ್ಷನ್ ಮೊಹಲ್ಲಾದ ಡಿ.ಎ.ಆರ್. ಪೊಲೀಸ್‌ ಮೈದಾನದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಹಾಗೂ ಮಂಗಳೂರು ಪಬ್ಲಿಕ್ ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ, ಸ್ಪರ್ಧೆಗಳನ್ನು ಎದುರಿಸಬೇಕು, ಒಂದಲ್ಲ ಒಂದು ದಿನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಕ್ರೀಡಾಪಟುಗಳು ಸಕ್ರಿಯವಾಗಿ ಕ್ರೀಡೆಯಲ್ಲಿ ಪಾಲ್ಗೊಂಡು ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಬೇಕು ಎಂದರು.

ADVERTISEMENT

ಜಿಲ್ಲೆಯ ಕ್ರೀಡಾಪಟುಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಕಳುಹಿಸುವ ಮಹತ್ವಕಾಂಕ್ಷೆಯಿಂದ ಈ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ ಎಂದರು.

ಮಂಗಳೂರು ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಚಂದ್ರರಾಜ್ ಜೈನ್ ಮಾತನಾಡಿ, ಸೋಲೆ ಗೆಲುವಿನ ಸೋಪಾನ. ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಸದಾ ಗೆಲುವಿನ ಹಂಬಲದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಕ್ರೀಡಾಪಟುಗಳಲ್ಲಿ ಸಾಧಿಸುವ ಛಲವಿರಬೇಕು. ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.

ಮಂಗಳೂರು ಪಬ್ಲಿಕ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚರಣ್ ಕುಮಾರ್ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಸುರೇಶ್, ಮಂಗಳೂರು ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್‌ನ ಖಜಾಂಚಿ ಸುದೇಶ್, ಪ್ರಾಂಶುಪಾಲ ಜಗದೀಶ್, ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ವಿಜಯ್ ಕುಮಾರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.