ADVERTISEMENT

ಟಿಕೆಟ್‌ಗಾಗಿ ಪಕ್ಷಕ್ಕೆ ಬರಬೇಡಿ: ಡಿ.ಕೆ.ಸುರೇಶ್‌

ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲ; ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 16:05 IST
Last Updated 22 ಮಾರ್ಚ್ 2022, 16:05 IST
ಡಿ.ಕೆ.ಸುರೇಶ್
ಡಿ.ಕೆ.ಸುರೇಶ್   

ಹಾಸನ: ‘ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆದರೆ ಎದುರಿಸಲು ಕಾಂಗ್ರೆಸ್‌ಸಿದ್ಧವಾಗಿದೆ. ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಬರುವವರಿಗೆ ಸ್ವಾಗತ. ಆದರೆ ಟಿಕೆಟ್‌ ಪಡೆಯುವ ಉದ್ದೇಶದಿಂದ ಯಾರೊಬ್ಬರೂ ಬರುವುದು ಬೇಡ’ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

‘ಸಿ.ಎಂ.ಇಬ್ರಾಹಿಂ ಪಕ್ಷದಲ್ಲಿ ಎಲ್ಲಾ ಅಧಿಕಾರ ಅನುಭವಿಸಿದ್ದಾರೆ. ಪಕ್ಷದವಿಚಾರಕ್ಕೆ ಬೇಸತ್ತಿದ್ದಾರೋ ಅಥವಾ ವೈಯಕ್ತಿಕ ಕಾರಣಕ್ಕೆ ಪಕ್ಷ ತ್ಯಜಿಸಿದ್ದಾರೋತಿಳಿದಿಲ್ಲ’ ಎಂದು ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯಕೈಗೊಂಡಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಮಾತನಾಡಬೇಕು. ಕೇಂದ್ರದಿಂದ ಹಣ, ಭೂಮಿ ಬೇಕಿಲ್ಲ. ಪರಿಸರ ಇಲಾಖೆಯ ಅನುಮತಿ ಮಾತ್ರ ಬೇಕಿದೆ. ರಾಜ್ಯ ಸರ್ಕಾರಕೇಂದ್ರದಿಂದ ಈ ಅನುಮತಿ ಪಡೆಯದಿದ್ದರೆ ಅದು ಕನ್ನಡಿಗರಿಗೆ ದ್ರೋಹ ಮಾಡಿದಂತಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟವಿದೆಎಂದು ಅಪಪ್ರಚಾರ ಮಾಡಲಾಗುತ್ತಿದೆ. ಶಿವಕುಮಾರ್‌ ಪಕ್ಷದ ಅಧ್ಯಕ್ಷರು.ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಸದನದ ಒಳಗೆ ಸಿದ್ದರಾಮಯ್ಯ ಹೋರಾಟ ಮಾಡಿದರೆ, ಡಿಕೆಶಿ ಪಕ್ಷ ಸಂಘಟಿಸುತ್ತಿದ್ದಾರೆ. ಇದರಲ್ಲಿ ಯಾರದ್ದು ಪ್ರತಿಷ್ಠೆಯಿಲ್ಲ’ ಎಂದು ಸುರೇಶ್‌ ಸ್ಪಷ್ಟಪಡಿಸಿದರು.

ಇನ್ನೂ ಹೆಚ್ಚಳ: ‘ಪಂಚ ರಾಜ್ಯ ಚುನಾವಣೆ ಸಂದರ್ಭದಲ್ಲಿ ಇಳಿಕೆಯಾಗಿದ್ದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಫಲಿತಾಂಶ ಪ್ರಕಟವಾದ ಬಳಿಕಏರಿಕೆಯಾಗಿದ್ದು, ಇದು ಮೊದಲ ಹಂತವಷ್ಟೇ. ಇನ್ನೂ ಹೆಚ್ಚಾಗಲಿದೆ’ ಎಂದು ಹೇಳಿದರು.

‘ಅಗತ್ಯ ವಸ್ತುಗಳ ದರ ಹಂತ ಹಂತವಾಗಿ ಏರಿಕೆ ಆಗುತ್ತಿದೆ. ಜನರೇ ಬಿಜೆಪಿಸರ್ಕಾರದ ಆಡಳಿತ ಮೆಚ್ಚಿರುವುದರಿಂದ ಅದರ ಬಗ್ಗೆ ಹೆಚ್ಚುಮಾತನಾಡುವುದಿಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆ ತಡೆಯುವುದರಲ್ಲಿವಿಫಲವಾಗಿದ್ದು, ಜನರ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಲ್ಲಿದೆ’ ಎಂದು ತಿಳಿಸಿದರು.

‘ರಾಜ್ಯದಿಂದ ರಾಜ್ಯಕ್ಕೆ ಚುನಾವಣೆ ಬದಲಾಗುತ್ತದೆ. ಉತ್ತರ ಭಾರತದಪರಿಸ್ಥಿತಿಗೂ ದಕ್ಷಿಣ ಭಾರತಕ್ಕೂ ಬಹಳ ವ್ಯತ್ಯಾಸವಿದೆ. ಇಲ್ಲಿನ ಜನ ಆಡಳಿತ, ಅಭಿವೃದ್ಧಿ ನೋಡಿ ಮತ ನೀಡುತ್ತಾರೆ. ಬಿಜೆಪಿ ತಮಿಳುನಾಡಿನಲ್ಲಿ 2 ಸ್ಥಾನ, ಕೇರಳ–1, ಪಂಜಾಬ್‌ನಲ್ಲಿ 2 ಸ್ಥಾನ ಗೆದ್ದಿದೆ’ ಎಂದರು.

ರಾಜಕೀಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮಾತನಾಡಿ ‘ದಿ ಕಾಶ್ಮೀರ್‌ ಫೈಲ್‌’ ಸಿನಿಮಾವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಆ ಘಟನೆ ನಡೆದಾಗ ಕಾಂಗ್ರೆಸ್ ಅಧಿಕಾರದಲ್ಲಿರಲಿಲ್ಲ. ಅಲ್ಲಿ ಪಂಡಿತರ ಹತ್ಯೆಯಷ್ಟೇ ಆಗಿಲ್ಲ. ಅನ್ಯ ಧರ್ಮೀಯ, ಜಾತಿಯವರ ಹತ್ಯೆಯೂ ಆಗಿದೆ. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ನಿರಾಶ್ರಿತ ಪಂಡಿತರಿಗಾಗಿ ₹ 1,330 ಕೋಟಿ ಪ್ಯಾಕೇಜ್‌ ನೀಡಿದ್ದರು. ಆದರೆ, ಬಿಜೆಪಿ ಸರ್ಕಾರ ಸಿನಿಮಾಕ್ಕೆ ವಿನಾಯಿತಿ ನೀಡಿದೆ. ಆದರೆ ತಮಿಳುನಾಡಿನಲ್ಲಿ ನಡೆದ ನೈಜ ಘಟನೆ ಆಧಾರಿತ ಜೈ ಭೀಮ್‌ ಚಿತ್ರಕ್ಕೆ ಯಾಕೆ ವಿನಾಯಿತಿ ನೀಡಲಿಲ್ಲ’ ಎಂದು ಪ್ರಶ್ನಿಸಿದರು.

ಮುಖಂಡರಾದ ಎಚ್.ಕೆ.ಜವರೇಗೌಡ, ಎಚ್.ಕೆ.ಮಹೇಶ್, ಯುವ ಕಾಂಗ್ರೆಸ್ಜಿಲ್ಲಾ ಅಧ್ಯಕ್ಷ ರಂಜಿತ್ ಗೊರೂರು, ಬನವಾಸೆ ರಂಗಸ್ವಾಮಿ, ಬೂದೇಶ್, ರಾಮಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.