ADVERTISEMENT

ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 13:05 IST
Last Updated 24 ಡಿಸೆಂಬರ್ 2020, 13:05 IST
ಹಾಸನದಲ್ಲಿ ನಂದಿನ ಸಿಹಿ ಉತ್ಸವಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್‌ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು.
ಹಾಸನದಲ್ಲಿ ನಂದಿನ ಸಿಹಿ ಉತ್ಸವಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್‌ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು.   

ಹಾಸನ: ಹಾಸನ ಹಾಲು ಒಕ್ಕೂಟದ (ಹಾಮೂಲ್‌) ವತಿಯಿಂದ ಡಿ.24 ರಿಂದ ಜ.7 ರ ವರೆಗೆ ಆಯೋಜಿಸಿರುವ ನಂದಿನಿ ಸಿಹಿ ಉತ್ಸವಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್‌ ಮತ್ತು ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ ಅವರು ಹೇಮಾವತಿ ಪ್ರತಿಮೆ ಬಳಿಯಿರುವ ನಂದಿನಿ ಮಳಿಗೆಯಲ್ಲಿ ಗುರುವಾರ ಚಾಲನೆ ನೀಡಿದರು.

ಗ್ರಾಹಕರಲ್ಲಿ ನಂದಿನಿ ಉತ್ಪನ್ನಗಳ ಕುರಿತು ಅರಿವು ಮುಡಿಸುವ ಉದ್ದೇಶದಿಂದ ಉತ್ಸವ ಆಯೋಜನೆಗೊಂಡಿದೆ. 15 ದಿನ ಗ್ರಾಹಕರಿಗೆ ನಂದಿನಿ ಸಿಹಿ ಉತ್ಪನ್ನಗಳ ಮಾರಾಟದ ಮೇಲೆ ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಹಾಮೂಲ್‌ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮಾತನಾಡಿ, ‘ವರ್ಷದಲ್ಲಿ ಎರಡು ಬಾರಿ ಸಿಹಿ ಉತ್ಸವ ಆಯೋಜಿಸಲಾಗುತ್ತದೆ. ನಂದಿನಿ ಸಿಹಿ ಉತ್ಪನ್ನಗಳ ಮಾರಾಟದ ಮೇಲೆ ಶೇಕಡಾ 10ರಷ್ಟು ರಿಯಾಯಿತಿ ನೀಡಿರುವುದನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು. ಮೈಸೂರು ಪಾಕ್‌, ಕ್ಯಾಷ್ಯ ಬರ್ಫಿ, ಕೊಕೊನಟ್ ಬರ್ಫಿ, ಚಾಕೊಲೇಟ್ ಬರ್ಪಿ, ಏಲಕ್ಕಿ ಪೇಡ, ಪಾಯಸ ಮಿಕ್ಸ್‌, ರಸಗುಲ್ಲಾ ಸೇರಿದಂತೆ ಹಲವು ಉತ್ಪನ್ನಗಳಿಗೆ ರಿಯಾಯಿತಿ ಇದೆ’ ಎಂದು ಹೇಳಿದರು.

‘ಕೋವಿಡ್‌ ಲಾಕ್‌ಡೌನ್‌ ತೆರವು ಬಳಿಕ ಒಕ್ಕೂಟ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದೆ. ಬೆಣ್ಣೆ, ತುಪ್ಪ ದರದಲ್ಲೂ ಏರಿಕೆಯಾಗಿದೆ. ನಿತ್ಯ ಹತ್ತು ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗುತ್ತಿದೆ. ಅದರಲ್ಲಿ ಎರಡು ಲಕ್ಷ ಲೀಟರ್‌ ಸ್ಥಳೀಯವಾಗಿ, ದೆಹಲಿ ಮದರ್ ಡೈರಿಗೆ ಒಂದೂವರೆ ಲಕ್ಷ ಲೀಟರ್‌, ವಿಶಾಖ ಡೈರಿಗೆ ಒಂದು ಲಕ್ಷ ಲೀಟರ್, ಹೈದರಾಬಾದ್ ಡೈರಿಗೆ ಒಂದೂವರೆ ಲಕ್ಷ ಲೀಟರ್‌ ಹಾಲು ಮಾರಾಟ ಮಾಡಲಾಗುತ್ತಿದೆ. ಉಳಿದ ಹಾಲನ್ನು ಪೌಡರ್‌ ಪರಿವರ್ತನೆಗೆ ಬಳಸಿಕೊಳ್ಳಲಾಗುತ್ತಿದೆ. ಪೆಟ್‌ ಬಾಟಲ್‌ ಘಟಕ ಜನವರಿಯಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದು ವಿವರಿಸಿದರು.

ADVERTISEMENT

ಹಾಮೂಲ್‌ ಆಡಳಿತ ಮಂಡಳಿ ನಿರ್ದೇಶಕ ನಾಗರಾಜು ಮಾತನಾಡಿ, ಒಕ್ಕೂಟ ಗಳಿಸುವ ಲಾಭಾಂಶವನ್ನು ರೈತರಿಗೆ ನೀಡಲಾಗುವುದು. ನಂದಿನಿ ಸಿಹಿ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಿರುವುದರಿಂದ ಹೆಚ್ಚು ಮಾರಾಟವಾಗುತ್ತದೆ ಎಂದರು.

ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿ ಮಾತನಾಡಿ, ನಂದಿನಿ ಉತ್ಪನ್ನಗಳು ವಿಶ್ವದರ್ಜೆಯ ಗುಣಮಟ್ಟದಿಂದ ಕೂಡಿದೆ. ಸಿಹಿ ಉತ್ಸವದ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದರು.

ಮಾರುಕಟ್ಟೆ ಅಧಿಕಾರಿ ರಂಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.