ಹಾಸನ: ಇಲ್ಲಿನ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯಕಾರಿ ಮಂಡಳಿಯ ವಿರುದ್ಧ ಸೋಮವಾರ ನಡೆದ ಅವಿಶ್ವಾಸ ನಿರ್ಣಯ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು.
ಎರಡೂ ಬಣಗಳ ನಡುವಿನ ತಿಕ್ಕಾಟ ತಾರಕಕ್ಕೆ ಏರಿದ್ದು, ಉಭಯ ಬಣಗಳು ತಮ್ಮದೇ ನಿಜವಾದ ಆಡಳಿತ ಮಂಡಳಿ ಎಂದು ಘೋಷಿಸಿಕೊಂಡವು.
‘ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶವಿಲ್ಲ’ ಎಂದು ಪ್ರತಿಪಾದಿಸಿದ ಹಾಲಿ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ಹಾಗೂ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಬಣದ 11 ಸದಸ್ಯರು ತಮ್ಮದೇ ನಿಜವಾದ ಆಡಳಿತ ಮಂಡಳಿ ಎಂದು ನಿರ್ಣಯ ಅಂಗೀಕರಿಸಿದರು.
ಇನ್ನೊಂದೆಡೆ, ಅಶೋಕ್ ಹಾರನಳ್ಳಿ ಬಣದ 13 ಸದಸ್ಯರು, ನೂತನ ಅಧ್ಯಕ್ಷರಾಗಿ ಬಿ.ಆರ್. ಗುರುದೇವ್, ಕಾರ್ಯದರ್ಶಿಯಾಗಿ ಜಿ.ಟಿ.ಕುಮಾರ್, ಖಜಾಂಚಿಯಾಗಿ ಶ್ರೀಧರ್ ಅವರನ್ನು ಆಯ್ಕೆ ಮಾಡಿಕೊಂಡರು. ಬಣಗಳ ಕಿತ್ತಾಟ ಮುಂದುವರಿದಿದ್ದು, ಎರಡೂ ನಿರ್ಣಯದ ಪ್ರತಿಗಳನ್ನು ಸಹಕಾರ ಇಲಾಖೆಯ ವಿಶೇಷ ವೀಕ್ಷಕ ಅಧಿಕಾರಿ ಜಗದೀಶ್ ಅವರಿಗೆ ಸಲ್ಲಿಸಲಾಗಿದೆ.
‘ಅವಿಶ್ವಾಸ ನಿರ್ಣಯಕ್ಕೆ ಸೊಸೈಟಿ ನೋಂದಣಿ ಕಾಯ್ದೆಯಡಿ ಅವಕಾಶವಿಲ್ಲ. ವಿರೋಧಿ ಬಣದ 10 ನಿರ್ದೇಶಕರ ಗೊತ್ತುವಳಿ ತಿರಸ್ಕರಿಸಲಾಗಿದೆ’ ಎಂದು ದ್ಯಾವೇಗೌಡ ಪ್ರತಿಕ್ರಿಯಿಸಿದರು. ‘ಜಿ.ಆರ್ ಶ್ರೀನಿವಾಸ್ ಸೇರಿ 13 ನಿರ್ದೇಶಕರು, ಅವಿಶ್ವಾಸ ನಿರ್ಣಯ ಕೈಗೊಂಡು ಹಿಂದಿನ ಮಂಡಳಿ ಪದ ಚ್ಯುತಗೊಳಿಸಿದ್ದೇವೆ’ ಎಂದು ಇನ್ನೊಂದು ಬಣದ ಅಧ್ಯಕ್ಷ ಬಿ.ಆರ್. ಗುರುದೇವ್ ಹೇಳಿದರು.
‘ಅವಿಶ್ವಾಸ ಮಂಡನೆಗೆ ಗುರಿಯಾಗಿರುವ ಅಧ್ಯಕ್ಷರೇ ಅವಿಶ್ವಾಸ ನಿರ್ಣಯ ಸಭೆ ಮಾಡುವಂತಿಲ್ಲ’ ಎಂದು ಸಂಸ್ಥೆಯ ಹಿರಿಯ ನಿರ್ದೇಶಕ, ಮಾಜಿ ಅಧ್ಯಕ್ಷ ಅಶೋಕ್ ಹಾರನಳ್ಳಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.