ADVERTISEMENT

ಕಾಡಾನೆ ದಾಳಿಗೆ ಕಾರ್ಮಿಕ ಸಾವು

ಕಾಡಾನೆ ಹಾವಳಿ ತಡೆಗಟ್ಟಲು ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಮೇ 2021, 5:06 IST
Last Updated 8 ಮೇ 2021, 5:06 IST
ಬೇಲೂರು ತಾಲ್ಲೂಕಿನ ಅರೇಹಳ್ಳಿ ಸಮೀಪದ ಹುಲ್ಲೆಮಕ್ಕಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ಶಿವು
ಬೇಲೂರು ತಾಲ್ಲೂಕಿನ ಅರೇಹಳ್ಳಿ ಸಮೀಪದ ಹುಲ್ಲೆಮಕ್ಕಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ಶಿವು   

ಬೇಲೂರು: ತಾಲ್ಲೂಕಿನ ಅರೆಹಳ್ಳಿ ಹೋಬಳಿಯ ಹುಲ್ಲೆಮಕ್ಕಿ ಗ್ರಾಮದಲ್ಲಿ ಶುಕ್ರವಾರ ಕಾಡಾನೆ ದಾಳಿಯಿಂದ ಕಾಫಿ ತೋಟದ ಕಾರ್ಮಿಕ ಶಿವು (55) ಮೃತಪಟ್ಟಿದ್ದಾರೆ.

ಬಾಳೆಹೊನ್ನೂರಿನವರಾದ ಶಿವು ಹಲವು ವರ್ಷಗಳಿಂದ ಅರೇಹಳ್ಳಿಯ ಲಿಂಗಾಪುರದಲ್ಲಿ ವಾಸವಿದ್ದರು. ಶುಕ್ರವಾರ ಬೆಳಿಗ್ಗೆ 10ರ ಸುಮಾರಿಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಶಿವು ಅವರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ.

ಆನೆ ದಾಳಿಯಿಂದ ಈ ಭಾಗದ ಕೂಲಿಕಾರ್ಮಿಕರು, ತೋಟದ ಮಾಲೀಕರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಆನೆ ಹಾವಳಿಗೆ ಶಾಶ್ವತವಾಗಿ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಮೃತರ ಕುಟುಂಬದವರಿಗೆ ₹ 2 ಲಕ್ಷ ಪರಿಹಾರದ ಚೆಕ್‌ ಅನ್ನು ಶಾಸಕ ಕೆ.ಎಸ್.ಲಿಂಗೇಶ್‌ ನೀಡಿದರು.

ಉಳಿದ ₹ 5.50 ಲಕ್ಷ ಪರಿಹಾರ ವನ್ನು ಮರಣೋತ್ತರ ಪರೀಕ್ಷೆ ಬಳಿಕ ನೀಡಲಾಗುವುದು. ಮೃತರ ಪತ್ನಿಗೆ 5 ವರ್ಷ ₹ 2,000 ಮಾಸಾಶನ ನೀಡುವು ದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ತಿಳಿಸಿದರು.

ಹೆಚ್ಚಿನ ಉಪಟಳ ಮಾಡುತ್ತಿರುವ ಎರಡು ಕಾಡಾನೆಗಳನ್ನು ಲಾಕ್‌ಡೌನ್ ಮುಗಿದ ನಂತರ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗುವುದು ಎಂದು ಅವರು ಹೇಳಿದರು.

ಶಾಸಕ ಕೆ.ಎಸ್.ಲಿಂಗೇಶ್‌ ಮಾತನಾಡಿ, ‘ಕಳೆದ ನಾಲ್ಕು ತಿಂಗಳ ಹಿಂದಷ್ಟೆ ಒಬ್ಬ ಕಾರ್ಮಿಕ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಈಗ ಮತ್ತೊಬ್ಬರು ಮೃತಪಟ್ಟಿದ್ದಾನೆ. ಕಾಡಾನೆ ದಾಳಿಯಿಂದ ಬೆಳೆ ನಷ್ಟದ ಜೊತೆಗೆ ಜೀವಹಾನಿಯಾಗುತ್ತಿದೆ. ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಹಿಡಿಯಬೇಕು’ ಎಂದು ಒತ್ತಾಯಿಸಿದರು.

ಉಪ ವಲಯ ಅರಣ್ಯಾಧಿಕಾರಿ ಗುರುರಾಜ್ ಹಾಗೂ ಅರೇಹಳ್ಳಿ ಪಿಎಸ್ಐ ಮಹೇಶ್, ಪಿಡಿಒ ಸಂತೋಷ್, ಅರಣ್ಯ ರಕ್ಷಕರಾದ ರಘುಕುಮಾರ್, ವೇದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.