ADVERTISEMENT

ಕಾದಾಟದಲ್ಲಿ ಗಾಯಗೊಂಡು ಗಂಡಾನೆ ಸಾವು

ಕಳೇಬರದಲ್ಲಿ ಬಂದೂಕಿನ ಗುಂಡುಗಳು ಪತ್ತೆಯಾಗಿಲ್ಲ: ಡಿಎಫ್‌ಒ ಬಸವರಾಜ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 12:52 IST
Last Updated 15 ಮಾರ್ಚ್ 2021, 12:52 IST

ಹಾಸನ: ಸಕಲೇಶಪುರ ತಾಲ್ಲೂಕಿನ ಸುಂಡೇಕೆರೆ ಎಸ್ಟೇಟ್‌ ಬಳಿ ಭಾನುವಾರ ಕಾಡಾನೆಯನ್ನು ಗುಂಡಿಕ್ಕಿ ಹತ್ಯೆ ಮಾಡಿಲ್ಲ. ಪ್ರಾಥಮಿಕ ವರದಿ ಪ್ರಕಾರ ಕಾದಾಟದಲ್ಲಿ ಗಾಯಗೊಂಡು ಮೃತಪಟ್ಟಿರುವ ಸಾಧ್ಯತೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್‌.ಬಸವರಾಜ್‌ ತಿಳಿಸಿದರು.

ಸುಮಾರು 18 ರಿಂದ 20 ವರ್ಷದ ಗಂಡಾನೆ ವಾರದ ಹಿಂದೆಯೇ ಮೃತಪಟ್ಟಿದ್ದು, ದಂತಗಳು ಸಹ ಇದೆ. ಪಶು ವೈದ್ಯಕೀಯ ಕಾಲೇಜಿನ ರೋಗ ವಿಜ್ಞಾನ ಶಾಸ್ತ್ರ ವಿಭಾಗದಮುಖ್ಯಸ್ಥ ಡಾ.ರವಿಕುಮಾರ್ ಹಾಗೂ ಸ್ಥಳೀಯ ಪಶು ವೈದ್ಯ ಸಾಗರ್‌ ಅವರ ಮರಣೋತ್ತರ ಪರೀಕ್ಷೆ ನಡೆಸಿದ್ದು, ದೇಹದಲ್ಲಿ ಗುಂಡುಗಳು ಪತ್ತೆಯಾಗಿಲ್ಲ. ಕುತ್ತಿಗೆ ಭಾಗದಲ್ಲಿ ರಂಧ್ರಗಳು
ಆಗಿದೆ. ವಿಷಯುಕ್ತ ಆಹಾರ ಸೇವೆನೆ ಬಗ್ಗೆ ಖಚಿತ ಪಡಿಸಿಕೊಳ್ಳಲು ದೇಹದ ಮಾದರಿಯನ್ನುವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮದ ಏರಿದೆ ಆನೆ ಜತೆಗಿನ ಕಾದಾಟದಲ್ಲಿ ಗಾಯಗೊಂಡು ಸಾವಿಗೀಡಾಗಿರಬಹುದು. 50 ಸೆ.ಮೀ ಉದ್ದದ ದಂತ ದೇಹದಲ್ಲಿಯೇ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಎಸ್ಟೇಟ್‌ ಬಳಿ 15 ರಿಂದ 20 ಆನೆಗಳ ಎರಡು ಗುಂಪು ಬೀಡು ಬಿಟ್ಟಿರುವ ವಿಷಯವನ್ನು ಮಾರ್ಚ್‌ 2 ರಂದು ಎಸ್ಟೇಟ್‌ ಮ್ಯಾನೇಜರ್‌ ತಿಳಿಸಿದ್ದರು. ಆನೆ ಇದ್ದ ಕಾರಣ ತೋಟದಮಾಲೀಕರಾಗಲಿ, ಕಾರ್ಮಿಕರು ಕೆಲಸಕ್ಕೆ ಹೋಗಿರಲಿಲ್ಲ. ಕಾರ್ಮಿಕರಿಗೆ ತೊಂದರೆ ಆಗದಂತೆ ಸಿಬ್ಬಂದಿಯನ್ನು ನಿಯೋಜಿಸಿ, ನಿಗಾ ಇಡಲಾಗಿತ್ತು ಎಂದರು.

ADVERTISEMENT

ಜ.2ರಂದು ಹೆತ್ತೂರು ಹೋಬಳಿಯ ಅರಣಿ ಗ್ರಾಮ ಸಮೀಪದ ಆನೆಗುಂಡಿ ಪ್ರದೇಶದಲ್ಲಿ 24 ವರ್ಷದ ಹೆಣ್ಣಾನೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಿಂಗಲ್‌ ಬ್ಯಾರೆಲ್ ಬಂದೂಕಿನಿಂದ ಹಾರಿಸಿದ 12 ಎಂ.ಎಂ. ಗುಂಡು ದೇಹದಲ್ಲಿ ಪತ್ತೆಯಾಗಿತ್ತು. ಗುಂಡು ತಗುಲಿದ ಬಳಿಕವೂ ಆನೆ ಎಂಟು ದಿನ ಬದುಕಿತ್ತು. ಬಂದೂಕು ಬಳಸುವವರ ಪಟ್ಟಿ ಸಿದ್ಧಪಡಿಸಿದ್ದು,ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಯಸಳೂರು ಹೋಬಳಿಯ ಶನಿಕಲ್ ಗ್ರಾಮದಲ್ಲಿ ಮೃತಪಟ್ಟಿದ್ದ 55–60 ವರ್ಷದಆನೆ ದೇಹದಿಂದ ಎರಡು ದಂತಗಳು ಕಳವಾಗಿದ್ದು, ಮೊಬೈಲ್‌ ಕರೆಗಳ ಪರಿಶೀಲನೆನಡೆಯುತ್ತಿದೆ. ಹಿಂದೆಯೂ ಕೆಂಪು ಹೊಳೆ ಬಳಿ ಆನೆ ಕೊಂದು ದಂತ ಕಳವು ಮಾಡಲಾಗಿತ್ತು. ಅರಣ್ಯ ಮತ್ತು ಪೊಲೀಸ್‌ ಇಲಾಖೆ ತನಿಖೆ ನಡೆಸುತ್ತಿವೆ ಎಂದು ಮಾಹಿತಿ ನೀಡಿದರು.

ಹೆದ್ದಾರಿಯಲ್ಲಿ ನಾಲ್ಕು ಕಡೆ ಆನೆಗಳ ಸಂಚಾರ ಬಗ್ಗೆ ಮಾಹಿತಿ ಫಲಕ ಅಳವಡಿಸಿ, ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಆನೆ ದಾಳಿಯಿಂದ ಮೃತಪಟ್ಟರಾಜಸ್ತಾನದ ಕ್ಯಾಂಟರ್‌ ಲಾರಿ ಚಾಲಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವನ್ಯಜೀವಿ ದಾಳಿಯಿಂದಾಗಿ ಎರಡು ವರ್ಷದ ಬೆಳೆ ನಷ್ಟ ಪರಿಹಾರ ₹2 ಕೋಟಿ ಸರ್ಕಾರ ಬಿಡುಗಡೆ ಮಾಡಿದ್ದು, ₹20 ಲಕ್ಷ ಬಾಕಿ ಇದೆಎಂದರು.

ಜಿಲ್ಲೆಯಲ್ಲಿ 1991ರಿಂದ ಕಾಡಾನೆ ದಾಳಿಯಿಂದ 70 ಜನರು ಮೃತಪಟ್ಟಿದ್ದು, 53 ಆನೆಗಳುಸಾವಿಗೀಡಾಗಿವೆ. ಕಾಡಾನೆ ಹಾವಳಿ ತಡೆಗೆ ಆಲೂರು ಭಾಗದಲ್ಲಿ ರೈಲ್ವೆ ಕಂಬಿ ಅಳವಡಿಸುವ ಕಾರ್ಯ ನಡೆಯುತ್ತಿದ್ದು, 40 ಕಿ.ಮೀ. ತಡೆಗೋಡೆ ನಿರ್ಮಿಸಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.