ADVERTISEMENT

ಸಮಸ್ಯೆ ಪರಿಹರಿಸುವವನೇ ಎಂಜಿನಿಯರ್‌: ಆರ್.ಎಸ್. ಅಶ್ವತ್ ನಾರಾಯಣ್

ರಾಜೀವ್‌ ಪಾಲಿಟೆಕ್ನಿಕ್‌ನಲ್ಲಿ ಎಂಜಿನಿಯರ್‌ ದಿನಾಚರಣೆ: ಅಶ್ವತ್ ನಾರಾಯಣ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 4:27 IST
Last Updated 21 ಸೆಪ್ಟೆಂಬರ್ 2025, 4:27 IST
ಹಾಸನದ ರಾಜೀವ್ ಪಾಲಿಟೆಕ್ನಿಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹ್ಯಾಂಡ್ ಬುಕ್ ಫಾರ್ ಮಲ್ಟಿ ವಿಲೇಜ್ ಡ್ರಿಂಕಿಂಗ್ ವಾಟರ್ ಸಪ್ಲೈ ಸ್ಕೀಮ್ಸ್ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು
ಹಾಸನದ ರಾಜೀವ್ ಪಾಲಿಟೆಕ್ನಿಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹ್ಯಾಂಡ್ ಬುಕ್ ಫಾರ್ ಮಲ್ಟಿ ವಿಲೇಜ್ ಡ್ರಿಂಕಿಂಗ್ ವಾಟರ್ ಸಪ್ಲೈ ಸ್ಕೀಮ್ಸ್ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು   

ಹಾಸನ: ಎಂಜಿನಿಯರ್ ಎಂದರೆ ಕೇವಲ ಕಟ್ಟಡ, ಸೇತುವೆ ಅಥವಾ ಯಂತ್ರಗಳನ್ನು ನಿರ್ಮಿಸುವವರು ಮಾತ್ರವಲ್ಲ. ಎಂಜಿನಿಯರ್ ಎಂದರೆ ಸಮಸ್ಯೆ ಪರಿಹರಿಸುವವರು. ಹೊಸದನ್ನು ಸೃಷ್ಟಿಸುವವರು, ಸಮಾಜದ ಬದುಕನ್ನು ಸುಲಭಗೊಳಿಸುವವರು ಎಂದು ಅರಕಲಗೂಡು ತಾಲ್ಲೂಕಿನ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಆರ್.ಎಸ್. ಅಶ್ವತ್ ನಾರಾಯಣ್ ತಿಳಿಸಿದರು.

ನಗರದ ರಾಜೀವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಎಂಜಿನಿಯರ್‌ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರ್ ಎಂ. ವಿಶ್ವೇಶ್ವರಯ್ಯನವರ ಸಾಧನೆಗಳನ್ನು ನಿತ್ಯ ಓದುತ್ತ ಬಂದರೆ, ಅವರು ಎಂತಹ ಸಾಧಕರು, ಧೀಮಂತ ವ್ಯಕ್ತಿಗಳು, ಎಂತಹ ಎಂಜಿನಿಯರ್ ಆಗಿದ್ದರು ಎಂದು ನಿಮಗೆ ತಿಳಿಯುತ್ತದೆ ಎಂದರು.

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು. ವಿದ್ಯೆಯು ಮಾನವರಿಗೆ ಜ್ಞಾನ, ವಿಶೇಷವಾದ ಸೌಂದರ್ಯ ತರುತ್ತದೆ. ವಿದ್ಯೆಯು ಮಾನವನಿಗೆ ಸಂಪತ್ತಾಗಿದ್ದು, ಭೋಗ, ಯಶಸ್ಸು, ಸುಖವನ್ನು ಉಂಟು ಮಾಡುತ್ತದೆ. ವಿದ್ಯೆಯು ಶ್ರೇಷ್ಠ ಗುರುವಾಗಿ ಕಾರ್ಯ ಮಾಡುವುದು. ವಿದ್ಯೆ ಹಣಕ್ಕೆ ಸಿಗುವುದಿಲ್ಲ, ಹಣವಿದ್ದು ವಿದ್ಯೆಯಿಲ್ಲದವನು ಪಶುವಿಗೆ ಸಮಾನ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಆರ್. ಶಂಕರೇಗೌಡ ಮಾತನಾಡಿ, ವಿಶ್ವೇಶ್ವರಯ್ಯ ಅವರು ತಮ್ಮ ಅಸಾಧಾರಣ ಪ್ರತಿಭೆಯಿಂದ, ಶಿಸ್ತಿನಿಂದ ಹಾಗೂ ಪರಿಶ್ರಮದಿಂದ ಭಾರತದ ಅಭಿವೃದ್ಧಿಗೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಕೃಷಿ, ನೀರಾವರಿ ಯೋಜನೆಗಳಿಂದ ಹಿಡಿದು ಅಣೆಕಟ್ಟುಗಳ ನಿರ್ಮಾಣ, ಕೈಗಾರಿಕಾ ಅಭಿವೃಧ್ಧಿಯಿಂದ ಹಿಡಿದು ತಾಂತ್ರಿಕ ಶಿಕ್ಷಣದ ವಿಸ್ತರಣೆವರೆಗೆ ಅನೇಕ ಕ್ಷೇತ್ರಗಳಲ್ಲಿ ಅವರು ಪಥ ಪ್ರದರ್ಶಕರಾಗಿದ್ದರು ಎಂದು ವಿವರಿಸಿದರು.

ಆರ್.ಎಸ್. ಅಶ್ವತ್ ನಾರಾಯಣ್ ಬರೆದ ಹ್ಯಾಂಡ್ ಬುಕ್ ಫಾರ್ ಮಲ್ಟಿ ವಿಲೇಜ್ ಡ್ರಿಂಕಿಂಗ್ ವಾಟರ್ ಸಪ್ಲೈ ಸ್ಕೀಮ್ಸ್ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ನಿವೃತ್ತ ಅರಣ್ಯ ಸಿಬ್ಬಂದಿ ವೆಂಕಟೇಶ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃಧ್ಧಿ ಅಧಿಕಾರಿ ಗಂಗರಾಜು, ಕಾಲೇಜಿನ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.