ಹಾಸನ: ‘ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಮೇ 17ರ ವರೆಗೆ ನಿಖರ ದತ್ತಾಂಶ ಸಂಗ್ರಹಿಸಲಾಗುತ್ತಿದ್ದು, 101 ಪರಿಶಿಷ್ಟ ಜಾತಿಯ ಎಲ್ಲರೂ ಮೂಲ ಜಾತಿಯ ಹೆಸರನ್ನು ಹೇಳುವ ಮೂಲಕ ಮೀಸಲಾತಿ ಸೌಲಭ್ಯ ಪಡೆಯಬೇಕು’ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಪ್ರಧಾನ ಕಾರ್ಯದರ್ಶಿ ದೇವರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 101 ಪರಿಶಿಷ್ಟ ಜಾತಿಯ ಮೂಲ ಜಾತಿಗಳಾದ ಮಾದಿಗ, ಹೊಲೆಯ, ಸಮಗಾರ, ಡೋಹರ್, ಮಚಗಾರ, ಭೋವಿ, ಲಂಬಾಣಿ, ಕೊರಚ, ಕೊರಮ ಇತ್ಯಾದಿ ವಿವರವನ್ನು ಸ್ಪಷ್ಟವಾಗಿ ತಿಳಿಸುವಂತೆ’ ಮನವಿ ಮಾಡಿದರು.
‘ಮುಖ್ಯವಾಗಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಹರಿಜನ ಎಂದು ಬರೆಸಬಾರದು. ಈ ಸಮೀಕ್ಷೆ ಕಾರ್ಯಕ್ಕೆ ಪಕ್ಷ ಎಲ್ಲ ಹಂತದ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಪ್ರತಿಯೊಬ್ಬ ನಾಗರಿಕರಿಗೆ ಸಿಗಲಿದ್ದು, ಗಣತಿ ವೇಳೆ ಮೂಲ ಜಾತಿಯನ್ನು ಸ್ಪಷ್ಟಪಡಿಸಬೇಕು’ ಎಂದು ಹೇಳಿದರು.
ಸಮೀಕ್ಷೆ ಲೋಪ ಸರಿಪಡಿಸಲು ಆಗ್ರಹ: ‘ಮೇ 5 ರಿಂದ ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ ಕೆಲ ಬಿಎಲ್‌ಒಗಳು ಸರಿಯಾಗಿ ದತ್ತಾಂಶವನ್ನು ದಾಖಲಿಸದೇ ಲೋಪ ಎಸಗುತ್ತಿದ್ದಾರೆ. ಇವರಿಗೆ ಸರಿಯಾದ ತರಬೇತಿ ನೀಡಿಲ್ಲ ಎಂಬ ಆರೋಪ ಇದ್ದು, ಈ ಸಂಬಂಧ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ದಲಿತ ಮುಖಂಡ ವಿಜಯಕುಮಾರ್ ಆಗ್ರಹಿಸಿದರು.
‘ಚನ್ನರಾಯಪಟ್ಟಣ ಅಗ್ರಹಾರ ಬೀದಿಯಲ್ಲಿ ಸಮೀಕ್ಷೆ ವೇಳೆ ಬಿಎಲ್‌ಒ ಪ್ರಕಾಶ್ ಎಂಬುವರು ಒಂದು ಕುಟುಂಬದ ಪಡಿತರ ಚೀಟಿಯಲ್ಲಿನ ಎಲ್ಲ ಸದಸ್ಯರ ಮಾಹಿತಿಯನ್ನು ದಾಖಲಿಸದೇ, ಕೇವಲ ಇಬ್ಬರ ಹೆಸರನ್ನು ಆ್ಯಪ್‌ನಲ್ಲಿ ದಾಖಲಿಸಿದ್ದಾರೆ. ಇದರಿಂದ ಕುಟುಂಬದ ಉಳಿದ ಸದಸ್ಯರು ಸಮೀಕ್ಷೆಯಿಂದ ಹೊರಗುಳಿದಿದ್ದು, ಈ ರೀತಿ ಅನೇಕ ನ್ಯೂನತೆಗಳು ಕಂಡುಬಂದಿದೆ’ ಎಂದು ಆರೋಪಿಸಿದರು.
ವೆಂಕಟೇಶ್, ಶಶಿಕುಮಾರ್, ದೇವರಾಜ್, ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.