ADVERTISEMENT

ಎತ್ತಿನಹೊಳೆ ಯೋಜನೆಯಲ್ಲಿ ಭ್ರಷ್ಟಾಚಾರ: ಎಚ್‌.ಎಂ.ವಿಶ್ವನಾಥ್‌ ಆಕ್ರೋಶ

ಅರಣ್ಯ ಅಧಿಕಾರಿಗಳು ಭಾಗಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಮೇ 2019, 14:59 IST
Last Updated 16 ಮೇ 2019, 14:59 IST
ಎಚ್.ಎಂ.ವಿಶ್ವನಾಥ್‌
ಎಚ್.ಎಂ.ವಿಶ್ವನಾಥ್‌   

ಹಾಸನ: ಎತ್ತಿನಹೊಳೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ರಾಜ್ಯ ಸಮ್ಮಿಶ್ರ ಸರ್ಕಾರ ಏನೂ ಅರಿಯದಂತೆ ಸುಮ್ಮನಿದೆ ಎಂದು ಬಿಜೆಪಿ ಮುಖಂಡ ಎಚ್‌.ಎಂ.ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬ ಆರಂಭದಿಂದಲೂ ಎತ್ತಿನಹೊಳೆ ಕಾಮಗಾರಿಯನ್ನು ತಾತ್ಸಾರ ಭಾವದಿಂದ ಕಂಡಿದೆ. ಮಲೆನಾಡಿಗರ ಸಮಸ್ಯೆ ಅರಿಯುವಲ್ಲಿ ಸಚಿವ ಎಚ್.ಡಿ.ರೇವಣ್ಣ ಸಂಪೂರ್ಣ ವಿಫಲರಾಗಿದ್ದಾರೆ. ಪಶ್ಚಿಮ ಘಟ್ಟದ 600 ಎಕರೆ ಪ್ರದೇಶದಲ್ಲಿನ ಲಕ್ಷಾಂತರ ಮರಗಳನ್ನು ಕಡಿದು ಪೈಪ್‍ಲೈನ್ ಕಾಮಗಾರಿ ಪ್ರಾರಂಭಿಸಲಾಗಿದೆ. ಪರಿಸರ ಸಂರಕ್ಷಣೆಗಾಗಿ ಹಾಕಿಕೊಂಡಿದ್ದ ಯಾವ ನಿಯಮವನ್ನೂ ಅರಣ್ಯ ಇಲಾಖೆ ಹಾಗೂ ಕಾಮಗಾರಿ ಜವಾಬ್ದಾರಿ ಹೊತ್ತಿರುವ ವಿಶ್ವೇಶ್ವರಯ್ಯ ಜಲ ನಿಗಮ ಪಾಲಿಸುತ್ತಿಲ್ಲ ಎಂದು ಸುದ್ದಗೋಷ್ಠಿಯಲ್ಲಿ ಟೀಕಿಸಿದರು.

ಎತ್ತಿನಹೊಳೆ ಕಾಮಗಾರಿ ಪ್ರದೇಶದಲ್ಲಿ ಇದುವರೆಗೆ 2 ಲಕ್ಷ ಮರಗಳನ್ನು ಕಡಿಯಲಾಗಿದ್ದು, ಕೇವಲ ಎಂಟು ಸಾವಿರ ಮರಗಳ ಹನನ ಮಾಡಿರುವುದಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ನಾಶ ಮಾಡುವ ಪ್ರತಿ ಮರಕ್ಕೆ ಪರ್ಯಾಯವಾಗಿ ಎರಡು ಸಸಿ ನೆಡುವ ಹಾಗೂ ಐದು ವರ್ಷಗಳ ಪಾಲನೆ ಮಾಡುವ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಆದರೆ, ಈವರೆಗೆ ಸಸಿಗಳನ್ನು ನೆಟ್ಟಿಲ್ಲ. ಹಸಿರು ಪೀಠದ ಅಧಿಕಾರಿಗಳು ಭೇಟಿ ನೀಡುವ ಪ್ರದೇಶದಲ್ಲಿ ಮಾತ್ರ ಸಸಿ ನೆಟ್ಟಿದ್ದಾರೆ ಎಂದರು.

ADVERTISEMENT

ಕಡಿಯುವ ಪ್ರತಿ ಮರಕ್ಕೆ ₹ 200 ಅನ್ನು ಗುತ್ತಿಗೆದಾರರು ಸರ್ಕಾರಕ್ಕೆ ಪಾವತಿಸಬೇಕು. ಕೇವಲ ಎಂಟು ಸಾವಿರ ಮರಕ್ಕೆ ಹಣ ಪಾವತಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದು, ತನಿಖೆ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಕಾಮಗಾರಿ ಪ್ರದೇಶದಲ್ಲಿ ಕಡಿದಿರುವ 2 ಲಕ್ಷ ಮರಗಳಿಗೆ ₹ 4 ಕೋಟಿ ಸರ್ಕಾರಕ್ಕೆ ಪಾವತಿಸಬೇಕಿತ್ತು. ಸಣ್ಣ ಗಾತ್ರದ ಮರಗಳನ್ನು ನೆಲದಲ್ಲಿಯೇ ಹೂಳುತ್ತಿದ್ದಾರೆ. ದೊಡ್ಡ ಮರಗಳನ್ನು ಅಕ್ರಮವಾಗಿ ಮಂಗಳೂರು ಮಾರ್ಗವಾಗಿ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಕಲೇಶಪುರ ತಾಲ್ಲೂಕಿನ ಕೊಡಚಳ್ಳಿ ಗ್ರಾಮ ಸಮೀಪ ಜಪಾವತಿ ಎಂಬ ನದಿ ಉಗಮ ಸ್ಥಾನ ತನ್ನ ಸ್ವರೂಪ ಕಳೆದುಕೊಂಡಿದೆ. ಎತ್ತಿನಹೊಳೆ ಕಾಮಗಾರಿಗಾಗಿ ಪರಿಸರವನ್ನೇ ಹಾಳು ಮಾಡುತ್ತಿದ್ದಾರೆ. ಕಾಮಗಾರಿಗೆ ಭೂಮಿ ನೀಡಿರುವ ರೈತರಿಗೆ ಸರಿಯಾದ ಪರಿಹಾರವನ್ನೂ ನೀಡುತ್ತಿಲ್ಲ. ಈ ಸಂಬಂಧ ಅನೇಕ ರೈತರು ನ್ಯಾಯಾಲಯ ಮೆಟ್ಟಿಲೇರಿದ್ದು ಯಾವುದನ್ನೂ ಲೆಕ್ಕಿಸದೆ ಭೂಮಿ ಅಗೆಯುವ ಕೆಲಸ ನಡೆಯುತ್ತಿದೆ. ಕಾಮಗಾರಿ ಭಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಇನ್ನು ಹತ್ತು ವರ್ಷವಾದರೂ ಪೂರ್ಣಗೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.