ADVERTISEMENT

ಎತ್ತಿನಹೊಳೆ: ಭೂ ಪರಿಹಾರ ನೀಡಲು ಆಗ್ರಹ

ಡಿ.ಸಿ ಕಚೇರಿ ಎದುರು ರೈತ ಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 13:18 IST
Last Updated 4 ಡಿಸೆಂಬರ್ 2018, 13:18 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಹಾಸನ : ಭೂ ಸ್ವಾಧೀನಕ್ಕೆ ಸೂಕ್ತ ಪರಿಹಾರ ನೀಡಿದ ನಂತರ ಎತ್ತಿನಹೊಳೆ ಯೋಜನೆ ಕಾಮಗಾರಿ ಮುಂದುವರೆಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ಬಂದು ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿಗೆ ಮನವಿ ಸಲ್ಲಿಸಿದರು.

ಸಕಲೇಶಪುರ ತಾಲ್ಲೂಕಿನಲ್ಲಿ ರೈತರಿಗೆ ಪರಿಹಾರ ನೀಡಿ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಆಲೂರು ತಾಲ್ಲೂಕಿನ ಬಾಳೇಕೊಪ್ಪಲು, ಮಡಬಲು, ಕಿಮ್ಮನಹಳ್ಳಿ, ಕಾಮತ್ತಿ, ಕಲ್ಕೆರೆ, ಜಿಜಿ ಕೊಪ್ಪಲು, ಬೀರಕನ್ನಹಳ್ಳಿ, ಅಜ್ಜನಹಳ್ಳಿ, ತಾಳೂರು ಸೇರಿದಂತೆ ಸುಮಾರು 16 ಹಳ್ಳಿಗಳು ಹಾಗೂ ಬೇಲೂರು, ಅರಸೀಕೆರೆ ತಾಲ್ಲೂಕುಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ, ಸರ್ಕಾರ ರೈತರ ಜಮೀನನ್ನು ಕಾನೂನಾತ್ಮಕವಾಗಿ ಭೂ ಸ್ವಾಧೀನ ಪ್ರಕ್ರಿಯೆ (4/1 ಮತ್ತು 6/1 ಅನುಪಾತದಲ್ಲಿ) ಮಾಡಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

‌‘ಸಕಲೇಶಪುರ ತಾಲ್ಲೂಕಿನ 4 ಗ್ರಾಮಗಳು, ಆಲೂರು ತಾಲ್ಲೂಕಿನ 16 ಗ್ರಾಮಗಳು ಮತ್ತು ಬೇಲೂರು ತಾಲ್ಲೂಕಿನ 31 ಗ್ರಾಮಗಳು ಸೇರಿದಂತೆ ಒಟ್ಟು 1,793.24 ಎಕರೆ ಜಮೀನಿಗೆ ಸಾಮಾಜಿಕ ಪರಿಣಾಮ ನಿರ್ಧರಣೆ ಅಧ್ಯಯನ ವರದಿಯ ಮೌಲ್ಯ ಮಾಪನಕ್ಕಾಗಿ ತಜ್ಞರ ತಂಡವನ್ನು ರಚಿಸಲು 2018ರ ನ.14ರಂದು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. 10 ವರ್ಷಗಳಿಂದ ಭೂಮಿ ಮೌಲ್ಯ ಮಾಪನ ಮಾಡದೇ ರೈತರನ್ನು ವಂಚಿಸಿ ಯಾವುದೇ ರೀತಿಯ ಪರಿಹಾರ ನೀಡಿಲ್ಲ’ ಎಂದು ದೂರಿದರು.

‌‌‘ಸಕಲೇಶಪುರ ತಾಲ್ಲೂಕಿನ ಕಾಫಿ ತೋಟಗಳನ್ನು ಸ್ವಾಧೀನ ಪಡಿಸಿಕೊಂಡಿರುವುದಕ್ಕೆ ಎಕರೆಗೆ ₹ 38.46 ಲಕ್ಷ ದರ ನಿಗದಿ ಪಡಿಸಿ, ₹ 65 ಕೋಟಿ ಹಣ ನೀಡಲಾಗಿದೆ. ಆದರೆ, ಆಲೂರು ತಾಲ್ಲೂಕಿನಲ್ಲಿ ರೈತರ ಜಮೀನಿನಲ್ಲಿ ನಡೆಸುತ್ತಿರುವ ಕಾಮಗಾರಿಗೆ ಇನ್ನು ಪರಿಹಾರ ನೀಡಿಲ್ಲ’ ಎಂದು ಅಲವತ್ತುಕೊಂಡರು.

‌‘ಆಲೂರು ತಾಲ್ಲೂಕಿನ ಕಾಮತ್ತಿ ಮತ್ತು ವೀರನಹಳ್ಳಿ ಗ್ರಾಮಗಳ ಮೂಲಕ ಎತ್ತಿನಹೊಳೆ ನೀರನ್ನು ಕೊಂಡೊಯ್ಯಲು ಸುರಂಗ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರಿಂದ ರೈತರು ಸಂಕಷ್ಟ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 100 ಅಡಿ ಆಳದಲ್ಲಿ ಸುರಂಗ ನಿರ್ಮಾಣ ಮಾಡುತ್ತಿರುವುದರಿಂದ ಅಂತರ್ಜಲ ಬತ್ತಿ ಹೋಗಲಿದೆ ಎಂಬ ಆತಂಕ ಮನೆ ಮಾಡಿದೆ.

ಸುರಂಗ ಮಾರ್ಗದ ಅಕ್ಕ ಪಕ್ಕದ ಜಮೀನುಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಅಲ್ಲದೆ ರೈತರಿಗೆ ಪರಿಹಾರ ನೀಡದಿದ್ದರೂ ಕೊಳವೆ ಬಾವಿಗಳನ್ನು ಮುಚ್ಚಿ ಹಾಕಲಾಗಿದೆ. ಹಾಗಾಗಿ ಈ ಭಾಗಕ್ಕೆ ಹೆಚ್ಚಿನ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ, ಕಾರ್ಯದರ್ಶಿ ಲಕ್ಷ್ಮಣ್, ಆಲೂರು ತಾಲ್ಲೂಕು ಅಧ್ಯಕ್ಷ ಮಲ್ಲೇಶ್, ಪುಟ್ಟರಾಜು, ಸೊಂಪುರ ಚಲುವೇಗೌಡ, ಹೊನ್ನಾವರ ಸಿದ್ದಪ್ಪ, ದೇವರಾಜೇಗೌಡ, ಕಾಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.