ADVERTISEMENT

ದೈಹಿಕ ಸಾಮರ್ಥ್ಯ ಪರೀಕ್ಷೆಗೆ ನಕಲಿ ಅಭ್ಯರ್ಥಿ ಹಾಜರು: ಬಂಧನ

ಕೆ.ಎಸ್.ಆರ್.ಪಿ ಕಾನ್​ಸ್ಟೆಬಲ್ ನೇಮಕಾತಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 2:07 IST
Last Updated 10 ಮಾರ್ಚ್ 2021, 2:07 IST

ಹಾಸನ: ಕೆ.ಎಸ್.ಆರ್.ಪಿ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಯ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಯನ್ನು ಹಾಜರುಪಡಿಸಿ ಪರೀಕ್ಷೆ ಪಾಸು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ನಗರ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಗೋಪಾಲ್ ಬಿ. ಕಳ್ಳಿಗುದ್ದಿ ಬಂಧಿತ ಆರೋಪಿ.

ಕೆ.ಎಸ್.ಆರ್.ಪಿ ನೇಮಕಾತಿಯ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಗೊಂಡಿದ್ದ ಗೋಪಾಲ್ ಬಿ. ಕಳ್ಳಿಗುದ್ದಿ ಸೋಮವಾರ ಕರ್ತವ್ಯಕ್ಕೆ ಹಾಜರಾಗಲು 11ನೇ ಕೆ.ಎಸ್.ಆರ್.ಪಿ ಕಮಾಂಡೆಂಟ್ ಕಚೇರಿಗೆ ಬಂದಿದ್ದು, ಈ ಸಂದರ್ಭದಲ್ಲಿ ಈತನ ದಾಖಲೆಗಳ ಪರಿಶೀಲನೆ ಸಮಯದಲ್ಲಿ ಎತ್ತರದ ಬಗ್ಗೆ ಸಂಶಯ ಕಂಡುಬಂದಿದೆ.

ADVERTISEMENT

ಜತೆಗೆ ಕೆ.ಎಸ್.ಆರ್.ಪಿ ಕಾನ್‌ಸ್ಟೆಬಲ್‌ 2021ರ ಜ. 29ರಂದು ನಡೆಸಲಾಗಿದ್ದ ದೈಹಿಕ ಸಾಮರ್ಥ್ಯ ಪರೀಕ್ಷೆಯ ಚಿತ್ರೀಕರಣದ ದೃಶ್ಯಾವಳಿ ಪರಿಶೀಲಿಸಲಾಗಿತ್ತು. ಆದರೆ, ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಈತನ ಬದಲಾಗಿ ಮತ್ತೋರ್ವ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿರುವುದು ಚಿತ್ರೀಕರಣದ ವಿಡಿಯೊದಲ್ಲಿ ಬೆಳಕಿಗೆ ಬಂದಿತ್ತು.

ಗೋಪಾಲ್ ಕಳ್ಳಿಗುದ್ದಿ 167 ಸೆಂ.ಮೀ ಎತ್ತರವಿದ್ದು, ಕೆ.ಎಸ್.ಆರ್.ಪಿ ಪೊಲೀಸ್ ಪೇದೆಗೆ 170 ಸೆಂ.ಮೀ ಎತ್ತರ ಅಗತ್ಯವಿರುತ್ತದೆ. ಈ ಬಗ್ಗೆ ಕೆ.ಎಸ್.ಆರ್.ಪಿ ನೇಮಕಾತಿ ಶಾಖೆಯ ಪ್ರಥಮ ದರ್ಜೆ ಸಹಾಯಕ ಬಡಾವಣೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಕಲಂ 419, 420, 120(ಬಿ) 34 ಭಾರತೀಯ ದಂಡ ಸಂಹಿತೆಯಂತೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.