ಆಲೂರು–ಕಾಮತಿಕೂಡಿಗೆ ರಸ್ತೆಯಲ್ಲಿ ಬೆಳೆದಿರುವ ಮರಗಳು
ಆಲೂರು: ಕಸಬಾ ಬೈರಾಪುರದಿಂದ ಮಗ್ಗೆ ಹಾಗೂ ಅಲೂರಿನಿಂದ ಕಾಮತಿಕೂಡಿಗೆ ಹೋಗುವ ರಸ್ತೆ ಇಕ್ಕೆಲಗಳಲ್ಲಿರುವ ಅಕೇಶಿಯಾ ಮರಗಳ ಕೊಂಬೆಗಳು ರಸ್ತೆಗೆ ಬಾಗಿಕೊಂಡಿವೆ.
ಕೆಲವು ಮರಗಳು ಒಣಗಿದ ಸ್ಥಿತಿಯಲ್ಲಿದ್ದು, ಮಳೆ, ಗಾಳಿ ಬರುವ ಸಂದರ್ಭದಲ್ಲಿ ವಾಹನಗಳು ಹಾಗೂ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು, ವಾಹನ ಸವಾರರಿಗೆ ನೆರಳಿನ ಆಸರೆಯಾಗಲಿ ಎಂಬ ಉದ್ದೇಶದಿಂದ 35 ವರ್ಷಗಳ ಹಿಂದೆ ಅರಣ್ಯ ಇಲಾಖೆಯು ರಸ್ತೆಯ ಎರಡೂ ಬದಿಗಳಲ್ಲಿ ಹಾಕಿದ್ದ ಅಕೇಶಿಯಾ ಮರಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ತಿರುವುಗಳಲ್ಲಿ ಹಾಗೂ ಎದುರಿನಿಂದ ಬರುವ ವಾಹನಗಳು ಕಾಣಿಸದೇ ಇರುವುದರಿಂದ ಹೆಚ್ಚು ಅಪಘಾತಗಳು ಸಂಭವಿಸಿವೆ.
ವಾರದಿಂದ ಸುರಿಯುತ್ತಿರುವ ಗಾಳಿ, ಮಳೆಗೆ ಆಲೂರುನಿಂದ ಕಾಮತಿಕೂಡಿಗೆವರೆಗೂ ಹಲವು ಮರ ಹಾಗೂ ಮರದ ಕೊಂಬೆಗಳು ಅಲ್ಲಲ್ಲಿ ಬಿದ್ದಿದ್ದು, ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ವಾಹನ ಮತ್ತು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಸಂಚಾರಕ್ಕೆ ಅಡ್ಡಿಯಾಗಿರುವ ಮರಗಳನ್ನು ಕೂಡಲೇ ತೆರವು ಮಾಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಅಕೇಶಿಯಾ ಮರದ ಬೇರುಗಳು ಭೂಮಿಯಲ್ಲಿ ಆಳವಾಗಿರದೇ ಮೇಲ್ಪದರದಲ್ಲಿ ಅಗಲವಾಗಿ ಬೆಳೆಯುತ್ತಿದ್ದು, ಸ್ವಲ್ಪ ಗಾಳಿ, ಮಳೆಯಾದರೂ ಮರಗಳು ನೆಲಕ್ಕೆ ಉರುಳುತ್ತವೆ. ಐದಾರು ವರ್ಷಗಳಿಂದ ಮುಂಗಾರು ಮಳೆ, ಗಾಳಿ ಪ್ರಾರಂಭವಾದ ಸಂದರ್ಭದಲ್ಲಿ ಅಲ್ಲಲ್ಲಿ ಮರದ ಕೊಂಬೆಗಳು ಬೀಳುವುದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು.
ಐದಾರು ದಿನಗಳಿಂದ ಈ ಭಾಗದಲ್ಲಿ ಗಾಳಿ, ಮಳೆಯಾಗುತ್ತಿದ್ದು, ರಸ್ತೆ ಬದಿಯಲ್ಲಿರುವ ಮರಗಳು ಅಥವಾ ಕೊಂಬೆಗಳು ರಸ್ತೆಗೆ ಉರುಳುತ್ತಿವೆ. ರಸ್ತೆ ಬದಿಯಲ್ಲಿ ಮರಗಳು ಇರುವುದರಿಂದ ಎದುರಿನಿಂದ ಬರುವ ವಾಹನಗಳು ತಿರುವು ರಸ್ತೆಯಲ್ಲಿ ಕಾಣಿಸದಂತಾಗಿದೆ. ಮುಂಗಾರು ಮಳೆ ಪ್ರಾರಂಭವಾಗುವ ಮೊದಲು ಸಂಚಾರಕ್ಕೆ ಅಡ್ಡಿಯಾಗುವ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರ ಒತ್ತಾಯ.
ರಸ್ತೆಗೆ ಬಾಗಿರುವ, ಒಣಗಿರುವ ಮರಗಳನ್ನು ಮಳೆಗಾಲ ಆರಂಭಕ್ಕೂ ಮೊದಲು ಅರಣ್ಯ ಇಲಾಖೆ ತೆರವುಗೊಳಿಸಿ ವಾಹನ ಸಂಚಾರಿಗಳು ಹಾಗೂ ಪಾದಚಾರಿಗಳಿಗೆ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು.ಪೃಥ್ವಿರಾಮ್, ಇಮಟಿಪುರ ನಿವಾಸಿ
ಬೈರಾಪುರದಿಂದ ಮಗ್ಗೆ ಹಾಗೂ ಆಲೂರಿನಿಂದ ಕಾಮತಿಕೂಡಿಗೆಯವರೆಗೆ ರಸ್ತೆಯಲ್ಲಿ ಅಪಾಯದಲ್ಲಿರುವ ಕೆಲವು ಮರ ತೆರವುಗೊಳಿಸಲಾಗಿದೆ. ಮತ್ತೆ ಸರ್ವೆ ಮಾಡಿ ಮಳೆಗಾಲಕ್ಕೂ ಮುನ್ನ ತೆರವುಗೊಳಿಸಲಾಗುವುದು.ಯತೀಶ್, ವಲಯ ಅರಣ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.