ADVERTISEMENT

ಝರಿ, ಜಲಪಾತಗಳ ವೀಕ್ಷಣೆ ಸಂಪೂರ್ಣ ಬಂದ್‌

ಕೋವಿಡ್‌ ನಿಯಮ ಉಲ್ಲಂಘಿಸಿದರೆ ದಂಡ ಹಾಗೂ ಮೊಕದ್ದಮೆ ದಾಖಲು: ಎಸಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 13:13 IST
Last Updated 18 ಏಪ್ರಿಲ್ 2021, 13:13 IST
ಸಕಲೇಶಪುರ ತಾಲ್ಲೂಕಿನ ಮಗಜಹಳ್ಳಿ ಫಾಲ್ಸ್‌ಗೆ ಭಾನುವಾರ ಉಪವಿಭಾಗಾಧಿಕಾರಿ ಎಂ. ಗಿರೀಶ್ ನಂದನ್‌ ಹಾಗೂ ತಹಶೀಲ್ದಾರ್‌ ಎಚ್‌.ಬಿ. ಜೈಕುಮಾರ್‌ ಭೇಟಿ ನೀಡಿ ಪ್ರವಾಸಿಗರನ್ನು ಹೊರ ಕಳಿಸಿದರು
ಸಕಲೇಶಪುರ ತಾಲ್ಲೂಕಿನ ಮಗಜಹಳ್ಳಿ ಫಾಲ್ಸ್‌ಗೆ ಭಾನುವಾರ ಉಪವಿಭಾಗಾಧಿಕಾರಿ ಎಂ. ಗಿರೀಶ್ ನಂದನ್‌ ಹಾಗೂ ತಹಶೀಲ್ದಾರ್‌ ಎಚ್‌.ಬಿ. ಜೈಕುಮಾರ್‌ ಭೇಟಿ ನೀಡಿ ಪ್ರವಾಸಿಗರನ್ನು ಹೊರ ಕಳಿಸಿದರು   

ಸಕಲೇಶಪುರ: ತಾಲ್ಲೂಕಿನ ಮಗಜಹಳ್ಳಿ ಜಲಪಾತಕ್ಕೆ ಭಾನುವಾರ ದಿಢೀರ್ ಭೇಟಿ ನೀಡಿದ ಉಪವಿಭಾಗಾಧಿಕಾರಿ ಎಂ. ಗಿರೀಶ್‌ ನಂದನ್ ಹಾಗೂ ತಹಶೀಲ್ದಾರ್‌ ಎಚ್‌.ಬಿ. ಜೈಕು‌ಮಾರ್ ಕೋವಿಡ್‌ ನಿಯಮ ಉಲ್ಲಂಘಿಸಿ ನೀರಿನಲ್ಲಿ ಆಟವಾಡುತ್ತಿದ್ದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಗೆ ತಿಳಿವಳಿಕೆ ನೀಡಿ ಅಲ್ಲಿಂದ ಕಳಿಸಿದರು.

ತಾಲ್ಲೂಕಿನಲ್ಲಿರುವ ಝರಿ ಜಲಪಾತಗಳ ವೀಕ್ಷಣೆಯನ್ನು ಕೂಡಲೇ ಬಂದ್ ಮಾಡಲು ಆ ವ್ಯಾಪ್ತಿಯ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರವೇಶ ನಿರ್ಬಂಧಿಸಬೇಕು ಎಂದು ಉಪವಿಭಾಗಾಧಿಕಾರಿ ಸೂಚನೆ ನೀಡಿದರು.

‘ರೊಟ್ಟಿಕಲ್ಲು, ಅಬ್ಬಿ ಪಾಲ್ಸ್‌ ಹಾಗೂ ಇತರ ರೆಸಾರ್ಟ್‌ಗಳಿಗೂ ಸಹ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬರಲಿಲ್ಲ. ರೆಸಾರ್ಟ್‌ ಹಾಗೂ ಹೋಂ ಸ್ಟೇ ಮಾಲೀಕರು ಕಡ್ಡಾಯವಾಗಿ ಕೋವಿಡ್‌ ನಿಯಮಗಳನ್ನು ಪಾಲನೆ ಮಾಡಲೇಬೇಕು. ಪ್ರವಾಸಿಗರ ನೋಂದಣಿ ಕಡಿಮೆ ಮಾ‌ಡಿಕೊಳ್ಳಬೇಕು. ಬರುವ ಪ್ರವಾಸಿಗರಿಂದ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಅವರು ಬಳಸಿದ ಬೆಡ್‌ಶೀಟ್‌ ಹಾಗೂ ಇತರ ವಸ್ತುಗಳನ್ನು ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸುವ ಮೂಲಕ ಕೊರೊನಾ ಸೋಂಕು ಹರಡದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕಲ್ಯಾಣ ಮಂಟಪಗಳಿಗೆ ದಿಢೀರ್ ಭೇಟಿ: ಇಲ್ಲಿಯ ಒಕ್ಕಲಿಗರ ಕಲ್ಯಾಣ ಮಂಟಪ, ಉಮಾಶಂಕರ್ ಹಾಗೂ ಸೀಮಪ್ಪ ಶೆಟ್ಟಿ ಸಮುದಾಯ ಭವನಗಳಿಗೆ ಭೇಟಿ ನೀಡಿದರು.

ವಿವಾಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದವರು ಪರಸ್ಪರ 6 ಅಡಿ ಅಂತರದಲ್ಲಿ ಕುಳಿತುಕೊಳ್ಳುವಂತೆ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿವಳಿಕೆ ನೀಡಿದರು. ಕಲ್ಯಾಣ ಮಂಟಪ‌ಗಳಲ್ಲಿ ನಡೆಯುವ ವಿವಾಹ ಹಾಗೂ ಇತರ ಕಾರ್ಯಕ್ರಮಗಳಿಗೆ 100 ಜನರಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಯಾವ ಸಂದರ್ಭದಲ್ಲಿ ಬೇಕಾದರೂ ದಿಢೀರ್‌ ದಾಳಿ ನಡೆಸುತ್ತೇವೆ. ಹೆಚ್ಚು ಜನರನ್ನು ಸೇರಿಸಿಕೊಂಡು ಕಾರ್ಯಕ್ರಮ ನಡೆಸುತ್ತಿದ್ದರೆ, ಮಾಸ್ಕ್‌ ಇಲ್ಲದೆ ಅಂತರ ಕಾಪಾಡಿಕೊಳ್ಳದೆ ಇದ್ದರೆ ಯಾವುದೇ ದಂಡ ವಿಧಿಸುವ ಜೊತೆಗೆ ಪ್ರಕರಣ ದಾಖಲು ಮಾಡಲಾಗುವುದು, ಕಲ್ಯಾಣ ಮಂಟಪಗಳ ಮಾಲೀಕರು ಹಾಗೂ ವಿವಾಹ ಹಾಗೂ ಇತರ ಕಾರ್ಯಕ್ರಮ ನಡೆಸುವವರ ವಿರುದ್ಧ ಈ ಕ್ರಮ ಎಂದು ಉಪವಿಭಾಗಾಧಿಕಾರಿ ಎಂ. ಗಿರೀಶ್ ನಂದನ್ ಹೇಳಿದರು.

ಕಂದಾಯ ನಿರೀಕ್ಷಕ ಮಹೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.