ಹಾಸನ: ಪರಿಹಾರ ನೀಡದೇ ಹೈಟೆನ್ಷನ್ ವಿದ್ಯುತ್ ತಂತಿ ಎಳೆಯಲು ಅವಕಾಶ ನೀಡುವುದಿಲ್ಲ ಎಂದು ತಾಲ್ಲೂಕಿನ ಹಿರೇಕಡಲೂರು ಗ್ರಾಮದ ರೈತ ರಂಗಸ್ವಾಮಿ ಮರವೇರಿ ಕುಳಿತ ಘಟನೆ ಗುರುವಾರ ನಡೆದಿದೆ.
ವಿದ್ಯುತ್ ತಂತಿ ಎಳೆಯಲು 7.5 ಗುಂಟೆ ಜಮೀನಿನಲ್ಲಿರುವ ತೆಂಗಿನ ಮರಗಳನ್ನು ತೆರವುಗೊಳಿಸಲು ಸೆಸ್ಕ್ ಅಧಿಕಾರಿಗಳು ಮುಂದಾಗಿದ್ದು, ಮೊದಲು ಪರಿಹಾರ ನೀಡಿ ನಂತರ ಸರಿಯಾಗಿ ಜಮೀನು ಸರ್ವೆ ಮಾಡುವಂತೆ ರಂಗಸ್ವಾಮಿ ಹಾಗೂ ಇತರ ರೈತರು ಒತ್ತಾಯಿಸಿದರು.
ಇಲ್ಲಿನ ವಿದ್ಯುತ್ ಮಾರ್ಗಕ್ಕಾಗಿ 20 ತೆಂಗಿನ ಮರಗಳನ್ನು ತೆರವು ಮಾಡಲು ಸೆಸ್ಕ್ ಸಿಬ್ಬಂದಿ ಸಿದ್ಧತೆ ನಡೆಸಿದ್ದರು. ಆದರೆ, ಪರಿಹಾರ ನೀಡುವವರೆಗೂ ಮರ ತೆರವು ಮಾಡಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಈ ಮಧ್ಯೆ ಪೊಲೀಸ್ ಅಧಿಕಾರಿಗಳು, ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು.
ಸೂಕ್ತ ಪರಿಹಾರ ನೀಡುವಂತೆ ಲೋಕಸಭಾ ಸದಸ್ಯ ಹಾಗೂ ಶಾಸಕರಿಗೂ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಪಕ್ಕದ ಗ್ರಾಮದಲ್ಲಿ ವಿದ್ಯುತ್ ತಂತಿ ಎಳೆದಿದ್ದು, ಇದುವರೆಗೂ ಪರಿಹಾರ ನೀಡಿಲ್ಲ. ಆದ್ದರಿಂದ ಸೂಕ್ತ ಪರಿಹಾರ ಒದಗಿಸಿದ ನಂತರ ಮರ ತೆರವು ಮಾಡುವಂತೆ ಗ್ರಾಮಸ್ಥ ಗುರು ಒತ್ತಾಯಿಸಿದರು.
ಕಳೆದ ಬಾರಿಯೂ ಮರ ತೆರವು ಮಾಡುವ ಸಂದರ್ಭದಲ್ಲಿ ಒಂದಿಷ್ಟು ಪರಿಹಾರ ನೀಡಿ ಸೆಸ್ಕ್ ಕೈತೊಳೆದುಕೊಂಡಿದ್ದು, ಇದೀಗ ತೋಟಗಾರಿಕೆ ಇಲಾಖೆಯವರು ಸ್ಥಳಕ್ಕೆ ಬಂದು, ಸೂಕ್ತ ಸರ್ವೆ ನಡೆಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಮಾರುತಿ, ಡಿವೈಎಸ್ಪಿ ಮುರುಳೀಧರ್, ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ ನಂತರ ರೈತ ರಂಗಸ್ವಾಮಿ ಮರದಿಂದ ಕೆಳಗೆ ಇಳಿದು ಬಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.