ಹೆತ್ತೂರು: ಸಮೀಪದ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದಲ್ಲಿ ಕಾಡೆಮ್ಮೆ ದಾಳಿಯಿಂದ ಕೃಷಿಕ ತಿಮ್ಮಪ್ಪ (70) ಮೃತಪಟ್ಟಿದ್ದಾರೆ.
ತಿಮ್ಮಪ್ಪ ಅವರು ಕೂಲಿ ಕೆಲಸಕ್ಕೆ ತೆರಳಿದ್ದು, ಭಾನುವಾರ ಸಂಜೆ ವಾಪಸ್ ಆಗುವಾಗ ಕಾಡೆಮ್ಮೆಗಳು ದಾಳಿ ಮಾಡಿವೆ. ತಪ್ಪಿಸಿಕೊಳ್ಳಲು ತಿಮ್ಮಪ್ಪ ಪ್ರಯತ್ನಿಸಿದ್ದು ಸಾಧ್ಯವಾಗಿಲ್ಲ. ಬೇಲಿಯೊಳಗೆ ಅವಿತು ಕುಳಿತರೂ ಬಿಡದ ಕಾಡೆಮ್ಮ ಗುದ್ದಿ, ಕೊಂಬಿನಿಂದ ತೊಡೆಯನ್ನು ಸೀಳಿ ಸಾಯಿಸಿದೆ.
ರಾತ್ರಿಯಾದರೂ ತಿಮ್ಮಪ್ಪ ಮನೆಗೆ ಬಾರದಿದ್ದರಿಂದ ಸೋಮವಾರ ಬೆಳಿಗ್ಗೆ ಅವರ ಕುಟುಂಬಸ್ಥರು ಹುಡುಕಾಟ ನಡೆಸಿದ್ದು, ಪೊದೆಯೊಳಗೆ ಮೃತದೇಹ ಪತ್ತೆಯಾಗಿದೆ. ಕೂಡಲೇ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಶಾಸಕರು ಹಾಗೂ ಉನ್ನತ ಅಧಿಕಾರಿಗಳು ಬರುವವರೆಗೂ ಶವವನ್ನು ಎತ್ತುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದರು. ಸ್ಥಳಕ್ಕೆ ತೆರಳಿದ ಶಾಸಕ ಸಿಮೆಂಟ್ ಮಂಜು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶವವನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ಮಾಡಲು ಸಮಯವಾಗುತ್ತದೆ. ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ವೈದ್ಯರನ್ನು ಕರೆಸಿ, ಮರಣೋತ್ತರ ಪರೀಕ್ಷೆ ಮಾಡಲಾಯಿತು. ನಂತರ ಶಾಸಕರು ₹20 ಲಕ್ಷ ಪರಿಹಾರ ಧನದ ಚೆಕ್ ವಿತರಿಸಿದರು.
ಘಟನಾ ಸ್ಥಳದಲ್ಲಿ ಉಪ ವಿಭಾಗಾಧಿಕಾರಿ ಡಾ.ಎಂ.ಕೆ. ಶ್ರುತಿ, ಸಕಲೇಶಪುರ ಎಸಿಎಫ್ ಮಧುಸೂದನ್ ಹಾಜರಿದ್ದರು.
ಕಾಡಾನೆ ಸಮಸ್ಯೆ ಜೊತೆಗೆ ಕಾಡೆಮ್ಮೆಗಳ ಹಾವಳಿ ಸಹ ಈ ಭಾಗದಲ್ಲಿ ಉಂಟಾಗಿದೆ. ಸರ್ಕಾರಗಳು ಬರೀ ಸಭೆ ಮಾಡಿದರೆ ಸಾಲದು. ಕೂಡಲೆ ಇತ್ತ ಗಮನವರಿಸಿ ಕಾಡೆಮ್ಮೆಗಳನ್ನು ಸ್ಥಳಾಂತರ ಮಾಡಲು ಮುಂದಾಗಬೇಕು.ಕುಮಾರ್ ಕಾಫಿ ಬೆಳೆಗಾರ
ಕಾಡೆಮ್ಮೆ ಸಮಸ್ಯೆ ಮಲೆನಾಡು ಭಾಗದಲ್ಲಿದೆ. ಆದರೆ ಕಾಡೆಮ್ಮೆಗಳು ಯಾವುದೇ ವ್ಯಕ್ತಿಯನ್ನು ಸಾಯಿಸಿರಲಿಲ್ಲ. ಒಟ್ಟಾರೆಯಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತುರ್ತು ಸಭೆ ಮಾಡಲಾಗುವುದು.ಸಿಮೆಂಟ್ ಮಂಜು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.