ADVERTISEMENT

ಪರಿಹಾರ ಹಣ ಗಂಜಿಗೂ ಸಾಲುವುದಿಲ್ಲ: ರೈತರ ಅಳಲು

ಕೇಂದ್ರ ತಂಡದಿಂದ ವೀಕ್ಷಣೆ, ಪರಿಹಾರ ಮೊತ್ತ ಹೆಚ್ಚಿಸಲು ರೈತರ ಒತ್ತಾಯ

ಕೆ.ಎಸ್.ಸುನಿಲ್
Published 17 ಡಿಸೆಂಬರ್ 2021, 15:58 IST
Last Updated 17 ಡಿಸೆಂಬರ್ 2021, 15:58 IST
ಹಾಸನ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ನೆರೆಯಿಂದ ಹಾನಿಯಾದ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ಜಿಲ್ಲಾಧಿಕಾರಿ ಆರ್.ಗಿರೀಶ್‌, ಸಿಇಒ ಕಾಂತರಾಜ್‌, ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ ಇದ್ದಾರೆ
ಹಾಸನ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ನೆರೆಯಿಂದ ಹಾನಿಯಾದ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ಜಿಲ್ಲಾಧಿಕಾರಿ ಆರ್.ಗಿರೀಶ್‌, ಸಿಇಒ ಕಾಂತರಾಜ್‌, ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ ಇದ್ದಾರೆ   

ಹಾಸನ: ‘ಒಂದು ಎಕರೆ ರಾಗಿ ಬೆಳೆಯಲು ₹ 30 ಸಾವಿರ ಖರ್ಚಾಗುತ್ತದೆ. ಸರ್ಕಾರ ಬೆಳೆ ನಷ್ಟಕ್ಕೆ ಎಕರೆಗೆ ₹ 2,400 ಪರಿಹಾರ ನೀಡಿದೆ. ಈ ಪರಿಹಾರ ಹಣ ಗಂಜಿಗೂ ಸಾಲುವುದಿಲ್ಲ..’

ಕೇಂದ್ರ ಅಧ್ಯಯನ ತಂಡ ಭೇಟಿಗೂ ಮುನ್ನ ‘ಪ್ರಜಾವಾಣಿ’ ಜತೆ ಚನ್ನರಾಯಪಟ್ಟಣ ತಾಲ್ಲೂಕಿನ ಬರಗೂರು ಗ್ರಾಮದ ರೈತ ಗಂಗಾಧರ್ ತಾವು ಎದುರಿಸುತ್ತಿರುವ ಪ್ರಸ್ತುತ ಸನ್ನಿವೇಶದ ನೈಜ ಚಿತ್ರಣಬಿಚ್ಚಿಟ್ಟರು.

‘ಸತತ ಮಳೆಗೆ ರಾಗಿ ಬೆಳೆ ಸಂಪೂರ್ಣ ನಾಶವಾಗಿದೆ. ಮಾಡಿದ ಖರ್ಚು ಸಹ ಬಾರದಂತಾಗಿದೆ. ಸಾಲ ಮಾಡಿ ಸಂಕಷ್ಟದಲ್ಲಿದ್ದೇವೆ. ಅಳಿದುಳಿದಿರುವ ರಾಗಿ ದನಗಳು ತಿನ್ನಲು ಆಗುವುದಿಲ್ಲ. ಸರ್ಕಾರ ಈಗಲಾದರೂ ರೈತರ ನೆರವಿಗೆ ಧಾವಿಸಬೇಕು. ಇಲ್ಲವಾದರೆ ಕೂಲಿಅರಸಿಕೊಂಡು ವಲಸೆ ಹೋಗಬೇಕಾದ ಸ್ಥಿತಿ ಬರುತ್ತದೆ’ ಎಂದು ಅಳಲು ತೋಡಿಕೊಂಡರು.

ADVERTISEMENT

ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವಾಲಯದ ಎಸ್‌.ವಿಜಯ್ ಕುಮಾರ್‌, ವಿದ್ಯುತ್ ಸಚಿವಾಲಯದ ಭವ್ಯ ಪಾಂಡೆ ಅವರನ್ನೊಳಗೊಂಡ ಅಧ್ಯಯನ ತಂಡ ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ, ಸಕಲೇಶಪುರ ತಾಲ್ಲೂಕುಗಳ ಆಯ್ದ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ಬರಗೂರು, ಬ್ಯಾಡರಹಳ್ಳಿ, ಮೂಡನಹಳ್ಳಿ ಗ್ರಾಮದಲ್ಲಿ ಕೇಂದ್ರ ತಂಡಕ್ಕೆ ಮನವಿ ಸಲ್ಲಿಸಿದ ರೈತರು, ‘ಸತತ
ಎರಡು ವರ್ಷಗಳಿಂದ ಅತಿವೃಷ್ಟಿಯಿಂದ ಬೆಳೆ ಹಾನಿಯಾಗುತ್ತಿದೆ. ಬದುಕು ನಡೆಸುವುದೇ ಕಷ್ಟವಾಗಿದೆ.
ಜಾನುವಾರಿಗೂ ಮೇವು ಸಿಗಲಿಲ್ಲ. ಪರಿಹಾರ ಮೊತ್ತವನ್ನು ಹೆಚ್ಚಿಸಿ, ತ್ವರಿತವಾಗಿ ಬಿಡುಗಡೆ ಮಾಡಬೇಕು’
ಎಂದು ಮನವಿ ಮಾಡಿದರು.

ಮುಸುಕಿನ ಜೋಳ, ರಾಗಿ ಬೆಳೆ ಹಾಳಾಗಿರುವುದುನ್ನು ಅಧಿಕಾರಿಗಳಿಗೆ ಪ್ರದರ್ಶಿಸಿದ ರೈತರಾದ ಕೃಷ್ಣೇಗೌಡ,
ಧರ್ಮ, ‘ಮಳೆಯಿಂದಾಗಿ ಎರಡು ಎಕರೆ ಮುಸುಕಿನ ಜೋಳ ಹಾಗೂ ರಾಗಿ ಸಂಪೂರ್ಣ ನೆಲ ಕಚ್ಚಿದೆ. ಬಿತ್ತನೆ,
ಕೂಲಿ, ಗೊಬ್ಬರ ದರ ಹೆಚ್ಚಾಗಿದೆ. ಜೋಳಕ್ಕೆ ಫಂಗಸ್‌ ಬಂದಿರುವ ಕಾರಣ ಅದನ್ನು ಕೀಳಲು ಹೋಗಿಲ್ಲ. ಸೂಕ್ತ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಈ ಬಾರಿಯೂ ಬೆಳೆ ಕೈ ಹಿಡಿದಿಲ್ಲ. ಹಿಂದಿನ ನಿಯಮಾವಳಿ ಪ್ರಕಾರ ನೀಡುವ ಪರಿಹಾರ ಯಾವುದಕ್ಕೂ
ಸಾಲುವುದಿಲ್ಲ. ಕಾರ್ಮಿಕರ ಕೂಲಿ, ರಸಗೊಬ್ಬರ, ಡೀಸೆಲ್ ಸೇರಿದಂತೆ ಎಲ್ಲಾ ಬೆಲೆಯೂ ಏರಿಕೆಯಾಗಿದೆ.
ಕ್ವಿಂಟಲ್ ರಾಗಿ ಬೆಲೆ ₹ 3,200 ಇದೆ. ಆದರೆ, ಸರ್ಕಾರ ಹೆಕ್ಟೇರ್‌ಗೆ ₹ 6,800 ಪರಿಹಾರ ನೀಡಿದರೆ ಯಾವುದಕ್ಕೂ ಸಾಲುವುದಿಲ್ಲ’ ಎಂದು ರೈತ ಮಹಿಳೆ ಸರೋಜಮ್ಮ ಹೇಳಿದರು.

ತಂಡದ ಅಧಿಕಾರಿಗಳು ವಿವಿಧ ತಾಲ್ಲೂಕುಗಳಲ್ಲಿ ಹಾನಿಗೀಡಾಗಿರುವ ಮನೆಗಳು, ಶಾಲಾ ಕಟ್ಟಡ, ಅಂಗನವಾಡಿ ಕೇಂದ್ರ, ಕೆರೆ ಏರಿಒಡೆದ ಪ್ರದೇಶಗಳಿಗೆ ಭೇಟಿ ನೀಡಿ, ಹಾನಿ ಪ್ರಮಾಣ ವೀಕ್ಷಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜ್‌, ಚನ್ನರಾಯಪಟ್ಟಣ ತಹಶೀಲ್ದಾರ್ ಮಾರುತಿ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಕೃಷಿ ಜಂಟಿ ನಿರ್ದೇಶಕ ಕೆ.ಎಚ್.ರವಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೀಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.