ADVERTISEMENT

ಹಾಸನ: ಎರಡು ವರ್ಷದ ಬಳಿಕ ಶವ ಹೊರಕ್ಕೆ

ಸಂತೆಬಸವನಹಳ್ಳಿಯಲ್ಲಿ ತಂದೆಯಿಂದಲೇ ಮಗನ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:28 IST
Last Updated 13 ಆಗಸ್ಟ್ 2025, 2:28 IST
ತಂದೆಯಿಂದಲೇ ಕೊಲೆಯಾಗಿದ್ದ ರಘುವಿನ ಕಳೇಬರವನ್ನು ಹೊರತೆಗೆಯುವ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಶ್ರುತಿ, ಡಿವೈಎಸ್ಪಿ ಪ್ರಮೋದಕುಮಾರ್, ಪಿಐ ಮೋಹನರೆಡ್ಡಿ,  ಪಿಎಸ್ಸೈ ಪ್ರವೀಣ್ ಕುಮಾರ್. ಫಾರೆನ್ಸಿಕ್ ವೈದ್ಯ ಡಾ. ಸಂತೋಷ್ ಹಾಜರಿದ್ದರು 
ತಂದೆಯಿಂದಲೇ ಕೊಲೆಯಾಗಿದ್ದ ರಘುವಿನ ಕಳೇಬರವನ್ನು ಹೊರತೆಗೆಯುವ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಶ್ರುತಿ, ಡಿವೈಎಸ್ಪಿ ಪ್ರಮೋದಕುಮಾರ್, ಪಿಐ ಮೋಹನರೆಡ್ಡಿ,  ಪಿಎಸ್ಸೈ ಪ್ರವೀಣ್ ಕುಮಾರ್. ಫಾರೆನ್ಸಿಕ್ ವೈದ್ಯ ಡಾ. ಸಂತೋಷ್ ಹಾಜರಿದ್ದರು    

ಆಲೂರು: ತಾಲ್ಲೂಕಿನ ಸಂತೆಬಸವನಹಳ್ಳಿ ಗ್ರಾಮದಲ್ಲಿ ಹೂತು ಹಾಕಿದ್ದ ಶವವನ್ನು ಎರಡು ವರ್ಷದ ಬಳಿಕ ಪೊಲೀಸರು ಹೊರ ತೆಗೆದಿದ್ದು, ಹಣದ ವಿಚಾರಕ್ಕೆ ತಂದೆಯೇ ಮಗನನ್ನು ಕೊಲೆ ಮಾಡಿದ್ದ ಎಂಬ ಸತ್ಯ ಬಯಲಾಗಿದೆ. ರಘು (32) ತನ್ನ ತಂದೆ ಗಂಗಾಧರನಿಂದ ಕೊಲೆಯಾದ ವ್ಯಕ್ತಿ.

ಪ್ರಕರಣವೇನು?: ವಿವಾಹವಾಗಿ ವಿಚ್ಛೇದನ ಪಡೆದಿದ್ದ ರಘು ಹಣ ನೀಡುವಂತೆ ತಂದೆಯನ್ನು ಪೀಡಿಸುತ್ತಿದ್ದ. 2023ರ ಆ.14ರಂದು ಜಗಳ ತಾರಕಕ್ಕೆರಿ ಗಂಗಾಧರ ಮಗನನ್ನು ಹೊಡೆದು ಕೊಂದಿದ್ದ. ನಂತರ ಹಿರಿಯ ಮಗ ರೂಪೇಶ್ ಜೊತೆಗೂಡಿ ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಹೂತು ಹಾಕಿದ್ದ. ಎಲ್ಲೊ ಕೆಲಸ ಮಾಡಿಕೊಂಡಿದ್ದಾನೆ ಎಂದು ರಘು ಸಾವಿನ ಸುದ್ದಿ ಬಚ್ಚಿಟ್ಟಿದ್ದರು. ಒಂದು ತಿಂಗಳ ಹಿಂದೆ ಅನಾರೋಗ್ಯದಿಂದ ಗಂಗಾಧರ ಮೃತಪಟ್ಟಿದ್ದು, ತಂದೆಯ ಅಂತ್ಯಸಂಸ್ಕಾರಕ್ಕೆ ಕಿರಿಯ ಮಗ ರಘುನನ್ನು ಕರೆಸುವಂತೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಹಿರಿಯ ಪುತ್ರನಿಗೆ ಹೇಳಿದ್ದರು. ಈ ವೇಳೆ ರೂಪೇಶ್, ಕೊಲೆ ರಹಸ್ಯ ಬಾಯಿ ಬಿಟ್ಟಿದ್ದಾನೆ.

ಇದೀಗ ಗಂಗಾಧರ ಸಂಬಂಧಿ ಪಾಲಾಕ್ಷ ಎಂಬುವವರು ಆಲೂರು ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿ, ಮನೆ ಸಮೀಪದ ಇಂಗು ಗುಂಡಿಯಲ್ಲಿ ಹೂತು ಹಾಕಿದ್ದ ರಘುವಿನ ಅಸ್ತಿಪಂಜರವನ್ನು ಹೊರ ತೆಗೆದಿದ್ದಾರೆ. ಮೂಳೆ ಹಾಗೂ ತಲೆಬುರುಡೆಯನ್ನು ಹಿಮ್ಸ್‌ಗೆ ರವಾನಿಸಲಾಗಿದೆ.

ADVERTISEMENT

ಹೂತಿದ್ದ ಮೃತದೇಹ ಹೊರ ತೆಗೆಯುವ ಸಂದರ್ಭದಲ್ಲಿ ಪೊಲೀಸ್ ಬಂದೂಬಸ್ತ್ ಕಲ್ಪಿಸಲಾಗಿತ್ತು. ಉಪ ವಿಭಾಗಾಧಿಕಾರಿ ಶ್ರುತಿ, ಡಿವೈಎಸ್ಪಿ ಪ್ರಮೋದ್ ಕುಮಾರ್, ಪಿಐ ಮೋಹನರೆಡ್ಡಿ, ಪಿಎಸ್‌ಐ ಪ್ರವೀಣ್ ಕುಮಾರ್, ಫಾರೆನ್ಸಿಕ್ ವೈದ್ಯ ಡಾ.ಸಂತೋಷ್, ಉಪ ತಹಶೀಲ್ದಾರ್ ರಮೇಶ್, ಗ್ರಾಮ ಆಡಳಿತಾಧಿಕಾರಿ ಸಂತೋಷ್ ಹಾಜರಿದ್ದರು.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷ್ಯನಾಶ ಪ್ರಕರಣವನ್ನಾಗಿ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.