ADVERTISEMENT

ಸೇತುವೆ ಕುಸಿಯುವ ಆತಂಕದಲ್ಲಿ ಗ್ರಾಮಸ್ಥರು

ಅವೈಜ್ಞಾನಿಕ ಮೇಲ್ಸೇತುವೆ ಕಾಮಗಾರಿ: ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:52 IST
Last Updated 7 ಜುಲೈ 2022, 4:52 IST
ಭೈರಾಪುರ ಮೇಲ್ಸೇತುವೆ ಮೇಲೆ ಅರ್ಧ ಅಡಿ ನೀರು ನಿಂತಿರುವುದು.
ಭೈರಾಪುರ ಮೇಲ್ಸೇತುವೆ ಮೇಲೆ ಅರ್ಧ ಅಡಿ ನೀರು ನಿಂತಿರುವುದು.   

ಆಲೂರು: ರಾಷ್ಟ್ರೀಯ ಹೆದ್ದಾರಿ ಭೈರಾಪುರದಲ್ಲಿ ಆಲೂರು-ಮಗ್ಗೆ ರಸ್ತೆಗೆ ನಿರ್ಮಾಣ ಮಾಡಿರುವ ಮೇಲ್ಸೇತುವೆ ಮೇಲೆ ಸುಮಾರು ಅರ್ಧ ಅಡಿ ಮಳೆ ನೀರು ನಿಲ್ಲುತ್ತಿದ್ದು, ಜನಸಾಮಾನ್ಯರು ತಿರುಗಾಡಲು, ವಾಹನಗಳು ಸಂಚರಿಸಲು ತೊಂದರೆ ಉಂಟಾಗಿದೆ.

ಭೈರಾಪುರ ಗ್ರಾಮದ ಹೃದಯ ಭಾಗದಲ್ಲಿ ಆಲೂರಿನಿಂದ ಮಗ್ಗೆ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ದಾಟಲು ಮೇಲ್ಸೇತುವೆ ಮಳೆ ಬಂದಾಗ ಈ ಮೇಲ್ಸೇತುವೆ ಮೇಲೆ ನೀರು ನಿಲ್ಲುತ್ತಿದ್ದು, ಸೇತುವೆ ಕಾಮಗಾರಿ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸೇತುವೆ ಸಮತಟ್ಟಾಗಿದ್ದರೆ ನೀರು ನಿಲ್ಲುತ್ತಿರಲಿಲ್ಲ. ಆದರೆ ಸೇತುವೆ ಮೇಲೆ ನೀರು ಸಂಗ್ರಹ ಆಗುತ್ತಿರುವುದನ್ನು ಗಮನಿಸಿದರೆ ಸೇತುವೆ ಕುಸಿಯುವ ಆತಂಕ ಕಾಡುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ನಿರ್ಮಾಣ ಮಾಡಲಾಗಿದೆ. ಸೇತುವೆ ಕೆಳಗೆ ಮಂಗಳೂರು-ಬೆಂಗಳೂರು ಹೆದ್ದಾರಿ ಹಾಯ್ದು ಹೋಗಿದೆ. ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನಗಳು ತಿರುಗಾಡುತ್ತವೆ. ಯಾವ ಸಂದರ್ಭದಲ್ಲಿ ಏನು ಅನಾಹುತ ಎದುರಾಗಲಿದೆಯೊ ಎಂಬ ಭಯ ಜನಸಾಮಾನ್ಯರಲ್ಲಿ ಉಂಟಾಗಿದೆ. ಮಳೆಗಾಲ ಆಗಿರುವುದರಿಂದ ರಸ್ತೆ ಬದಿಯಲ್ಲಿರುವ ಮನೆಗಳಿಗೆ ಯಾವುದೇ ಭದ್ರತೆ ಇಲ್ಲದಾಗಿದೆ. ಕೂಡಲೆ ಹೆದ್ದಾರಿ ಅಧಿಕಾರಿಗಳು ಸೇತುವೆ ಪರಿಶೀಲನೆ ನಡೆಸಿ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು.

ADVERTISEMENT

ಸೇತುವೆ ಕೆಳಗೆ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿದೆ. ಈ ಸ್ಥಳದಲ್ಲಿ ರಾತ್ರಿ ವೇಳೆ ಕತ್ತಲು ಆವರಿಸುವುದರಿಂದ ದುಷ್ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ರಸ್ತೆಗೆ ಮೊದಲು ಬೀದಿ ದೀಪ ಅಳವಡಿಸಿ, ಜನರು ಮತ್ತು ವಾಹನಗಳ ಸುರಕ್ಷತೆ ಕಾಪಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

‘ಮೇಲ್ಸೇತುವೆಗೆ ಆರ್.ಸಿ.ಸಿ. ಹಾಕುವಾಗ ಮಧ್ಯೆ ಗುಂಡಿ ಆಗಿರುವುದನ್ನು ಗಮನಿಸಿ ತಿಳಿಸಿದರೂ, ಎಂಜಿನಿಯರ್ ಕೇಳಲಿಲ್ಲ. ಕೆಳಗೆ ಹಾದು ಹೋಗಿರುವ ರಸ್ತೆಗೆ ಸುರಕ್ಷಿತ ತಡೆಗೋಡೆ ನಿರ್ಮಾಣ ಮಾಡದೆ, ರಸ್ತೆ ಬದಿಯಲ್ಲಿ ಇರುವ ಮನೆಗಳು ಮಳೆಗಾಲದಲ್ಲಿ ಕುಸಿಯುವ ಹಂತದಲ್ಲಿವೆ. ಜಡಭರಿತ ಅಧಿಕಾರಿಗಳು ಯಾವುದನ್ನೂ ಲೆಕ್ಕಿಸದೆ ಜನರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಕೆಲ ವರ್ಷಗಳಿಂದ ಭೈರಾಪುರ ಗ್ರಾಮಕ್ಕೆ ಕಂಟಕ ಪ್ರಾರಂಭವಾಗಿದ್ದು ಯಾವಾಗ ಪರಿಹಾರ ಆಗುತ್ತದೆಯೋ ಅರಿಯದಾಗಿದೆ’ ಎಂದು ಭೈರಾಪುರ ನಿವಾಸಿ ಕೃಷ್ಣೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

‘ಸಚಿವರೊಂದಿಗೆ ಸ್ಥಳ ಪರಿಶೀಲನೆ’

‘ಭೈರಾಪುರದಲ್ಲಿ ನಿರ್ಮಾಣ ಮಾಡಿರುವ ಮೇಲ್ಸೇತುವೆ ಸಮತಟ್ಟಾ ಇಲ್ಲದೇ ಇರುವುದರಿಂದ ನೀರು ನಿಲ್ಲುತ್ತಿದೆ. ಈ ಬಗ್ಗೆ ಸೂಪರಿಂಟೆಂಡೆಂಟ್ ಎಂಜಿನಿಯರ್‌ಗೆ ತಿಳಿಸಿದ್ದೇನೆ. ರಸ್ತೆ ಇಬ್ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡದೆ ನಿವಾಸಿಗಳು ಭಯದಿಂದ ದಿನ ದೂಡುತ್ತಿದ್ದಾರೆ. ಲೋಕೋಪಯೋಗಿ ಸಚಿವರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಪರಿಶೀಲನೆ ನಡೆಸಲಾಗುವುದು’ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.