ADVERTISEMENT

ಸರಳ ಉತ್ಸವಕ್ಕೆ ಬೆಳಕಿನ ವೈಭವ

ದೀಪಾಲಂಕಾರ ಕಣ್ತುಂಬಿಕೊಳ್ಳಲು ಬರುತ್ತಿರುವ ಜನರು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 15:40 IST
Last Updated 7 ನವೆಂಬರ್ 2020, 15:40 IST
ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಬಿ.ಎಂ ರಸ್ತೆ
ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಬಿ.ಎಂ ರಸ್ತೆ   

ಹಾಸನ: ಹಾಸನಾಂಬೆ ಉತ್ಸವ ಅಂಗವಾಗಿ ನಗರದ ಮುಖ್ಯ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ಉತ್ಸವ ಆಚರಿಸಲಾಗುತ್ತಿದೆ. ದೇಗುಲದ ಆವರಣ, ರಾಜಗೋಪುರ, ಬಿ.ಎಂ ರಸ್ತೆ,
ಎನ್‌.ಆರ್‌. ವೃತ್ತ, ಆರ್‌.ಸಿ. ರಸ್ತೆ, ಸಾಲಗಾಮೆ ರಸ್ತೆ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿವೆ. ಈ ರಸ್ತೆಗಳು ಸೆಲ್ಫಿ
ಸ್ಪಾಟ್‌ಗಳಾಗಿವೆ.

ಸಂಜೆ ಏಳು ಗಂಟೆಯಾಗುತ್ತಿದ್ದಂತೆ ಯುವಕರು, ಮಹಿಳೆಯರು ಹಿರಿಯರು ನಗರ ಪ್ರದಕ್ಷಿಣಿ ಮೂಲಕ ಬೆಳಕಿನ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಾಗಾಗಿ ವಾಹನ ದಟ್ಟಣೆ ಹೆಚ್ಚಾಗಿದೆ. ದೀಪಾಲಂಕಾರಕ್ಕಾಗಿಯೇ ಜಿಲ್ಲಾಡಳಿತ ₹ 15 ಲಕ್ಷ ವೆಚ್ಚ ಮಾಡಿದೆ.

ADVERTISEMENT

ಹಾಸನಾಂಬೆ‌ಗೆ ಪೂಜೆ ಸಲ್ಲಿಸುವ ಅರ್ಚಕರಿಗೆ ಶನಿವಾರ ದೇಗುಲ ಪ್ರವೇಶ ನಿರ್ಬಂಧಿಸಿ, ಪ್ರವೇಶ ದ್ವಾರಕ್ಕೆ ಕಂದಾಯ
ಅಧಿಕಾರಿಗಳು ಬೀಗ ಹಾಕಿದ್ದರು. ಬೆಳಗ್ಗೆ 5.30 ರಿಂದ ದೇಗುಲದಲ್ಲಿ ಅರ್ಚಕರ ಒಂದು ತಂಡ ಪೂಜೆ ಸಲ್ಲಿಸುತ್ತಿತ್ತು. ಅವರನ್ನು ಹೊರಗೆ ಕಳಿಸಿ ಮತ್ತೊಂದು ತಂಡ ಪೂಜೆ ಸಲ್ಲಿಸುವುದಕ್ಕೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬಂದಿದೆ. ಆದರೆ, ಅಧಿಕಾರಿಗಳು ಒಳಗೆ ಬಿಡಲು ಗಂಟೆಗಟ್ಟಲೇ ಕಾಯಿಸಿದರು

‘ನಿತ್ಯವೂ ಇದೇ ರೀತಿ ಕಂದಾಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಾರೆ. ಕಂದಾಯ ಇಲಾಖೆ ಗುರುತಿನ ಚೀಟಿ ನೀಡಿದೆ. ಕೋವಿಡ್‌ ಪರೀಕ್ಷೆ ಮಾಡಿಸಿರುವ ಪ್ರಮಾಣ ಪತ್ರ ಸಹ ಇದೆ. ಆದರೂ ಒಳಗೆ ಬಿಡಲು ಸತಾಯಿಸುತ್ತಾರೆ’ ಎಂದು ಅರ್ಚಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಹಾಸನಾಂಬೆ ದರ್ಶನಕ್ಕೆ ಕೇವಲ ಗಣ್ಯರು ಹಾಗೂ ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಹೆಸರು ಹೇಳಿಕೊಂಡು ಹೋಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸ್‌ ಸಿಬ್ಬಂದಿ ಸಹ ತಮ್ಮ ಕುಟುಂಬದ ಸದಸ್ಯರನ್ನು ದೇವಿ ದರ್ಶನಕ್ಕೆ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

"ದೇವಿ ದರ್ಶನಕ್ಕೆ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕುಟುಂಬದವರು ಹಾಗೂ ಸ್ನೇಹಿತರನ್ನು ಕರೆದುಕೊಂಡು ಬರುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಹಾಗಾಗಿ ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಿದಾಗ ಅವರಿಗೆ ತಿಳಿಸಲಾಗುವುದು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.