
ಹಳೇಬೀಡು: ರೈತರು ತಾಳೆ ಕೃಷಿ ಕೈಗೊಳ್ಳುವುದರಿಂದ ನಿರ್ದಿಷ್ಟ ಆದಾಯ ಪಡೆಯಬಹುದು ಎಂದು ಪತಂಜಲಿ ಕಂಪನಿ ಕ್ಷೇತ್ರಾಧಿಕಾರಿ ಹನುಮೇಗೌಡ ಹೇಳಿದರು.
ಇಲ್ಲಿನ ರಾಜನಶಿರಿಯೂರು ಗ್ರಾಮದ ಪುಟ್ಟಮಲ್ಲೇಗೌಡರ ತೋಟದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಪತಂಜಲಿ ಕಂಪನಿ ಆಶ್ರಯದಲ್ಲಿ ಬುಧವಾರ ನಡೆದ ತಾಳೆಬೆಳೆ ಯೋಜನೆ ಅಡಿಯಲ್ಲಿ ರೈತರಿಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಾಳೆ ಬೆಳೆ ನಾಟಿ ಮಾಡಿದ 4 ವರ್ಷಗಳ ಬಳಿಕ ಫಸಲು ಬರುತ್ತದೆ. ಮಾರುಕಟ್ಟೆಗಾಗಿ ಪರದಾಡುವಂತಿಲ್ಲ. ಪತಂಜಲಿ ಕಂಪನಿ ನೇರವಾಗಿ ರೈತರಿಂದ ತಾಳೆ ಫಸಲನ್ನು ಉತ್ತಮ ಬೆಲೆಗೆ ಖರೀದಿ ಮಾಡುತ್ತದೆ’ ಎಂದು ಹೇಳಿದರು.
‘ತಾಳೆ ಕೃಷಿಗೆ ಇಲಾಖೆಯಿಂದ ಸಹಾಯ ಧನವೂ ದೊರಕುತ್ತದೆ. ತಿಂಗಳಿಗೆ ಎರಡು ಬಾರಿ ಕೊಯ್ಲು ಮಾಡಿ ಮಾರಾಟ ಮಾಡಲು ಅವಕಾಶವಿದೆ. ರೈತರು ತೋಟಗಾರಿಕೆ ಇಲಾಖೆ ಸಂಪರ್ಕಿಸಿ ತಾಳೆ ಕೃಷಿಯ ಮಾಹಿತಿ ಪಡೆಯಬೇಕು’ ಎಂದು ಹನುಮೇಗೌಡ ಹೇಳಿದರು.
ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ನಾಗರಾಜು ಮಾತನಾಡಿ, ‘ಅಡಿಕೆಗೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 1 ಲೀಟರ್ ನೀರಿಗೆ 1 ಮಿಲಿ ಪ್ರೋಫಿನೋಕೋನಜೋಲ್ ಸಿಂಪಡಣೆ ಮಾಡಬೇಕು.
ತೆಂಗಿನ ಕಾಂಡಾ ಸೋರುವ ರೋಗ ನಿಯಂತ್ರಣಕ್ಕೆ ಹೆಕ್ಸಾಕೊನೋಝೋಲ್ ಎಂಬ 5 ಮಿಲಿ ಔಷಧವನ್ನು 100 ಮಿಲಿ ನೀರಿಗೆ ಮಿಶ್ರಣ ಮಾಡಿ, ತೆಂಗಿನ ಗಿಡದ ಬೇರಿಗೆ ಬಳಕೆ ಮಾಡಬೇಕು’ ಎಂದು ಸಲಹೆ ಮಾಡಿದರು.
ತೋಟಗಾರಿಕಾ ಅಧಿಕಾರಿ ಮಧು ಕುಮಾರ್ ಕೆ.ಎಸ್ ಮಾತನಾಡಿ, ‘ತಾಳೆಯಿಂದ ಅಡುಗೆ ಎಣ್ಣೆ ಹಾಗೂ ಸೌಂದರ್ಯವರ್ಧಕಗಳನ್ನು ತಯಾರಿಸಬಹುದು, ಹೀಗಾಗಿ ತಾಳೆ ಫಸಲಿಗೆ ನಿರ್ದಿಷ್ಟ ಮಾರುಕಟ್ಟೆ ಇದೆ. ತಾಳೆಯೊಂದಿಗೆ ಅಂತರ ಬೆಳೆ ಮಾಡಿಕೊಂಡು ಹೆಚ್ಚಿನ ಆದಾಯ ಪಡೆಯಲು ಅವಕಾಶವಿದೆ’ ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬ್ಯಾಡಗೆರೆ ಪ್ರಗತಿಪರ ರೈತ ಅನಂತ್ ಕುಮಾರ್ ಅವರನ್ನು ಗೌರವಿಸಲಾಯಿತು.
ಕೃಷಿ ಅಧಿಕಾರಿ ಹೇಮಂತ್ ಕುಮಾರ್, ತೋಟಗಾರಿಕೆ ಅಧಿಕಾರಿಗಳಾದ ರಂಜಿತಾ, ಕಿಶೋರ್ ಮಾತನಾಡಿದರು.
ರೈತ ಪುಟ್ಟಮಲ್ಲೇಗೌಡ, ಶಿಕ್ಷಕ ಮೋಹನರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.