ಹೊಳೆನರಸೀಪುರ : ’ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರೂ ಸರಕಾರಿ ಶಾಲಾ, ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಲು ಸರಕಾರಗಳಿಗೆ ಆಗಿಲ್ಲ’ ಎಂದ ಶಾಸಕ ಎಚ್.ಡಿ.ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಳೆದ ಸಾಲಿನ ನಾನಾ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ’ಪ್ರಸ್ತುತ ರಾಜ್ಯ ಸರಕಾರ ಕಾಲೇಜು ವಿದ್ಯಾರ್ಥಿಗಳಿಗೆ ಬರುವ ೨೫ ರಿಂದ ೩೦ ಲಕ್ಷ ಸಹಾಯ ಧನಕ್ಕೂ ಕೈಹಾಕಿದೆ. ಶಿಕ್ಷಕರ , ಉಪನ್ಯಾಸಕರ ನೇಮಕಾತಿ ಮಾಡಿಲ್ಲ. ಶಾಲೆಗಳಿಗೆ ಕನಿಷ್ಟ ಮೂಲ ಸೌಕರ್ಯವನ್ನಾದರೂ ಕೊಡಲಾಗಿಲ್ಲದಿರುವುದು ವಿರ‍್ಯಾಸ’ ಎಂದು ದೂರಿದರು.
’ಹಾಸನ ಜಿಲ್ಲೆಗೆ ಮಾನ್ಯ ಉಪಲೋಕಾಯುಕ್ತರು ಭೇಟಿ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಸರಕಾರಿ ಜಾಗಗಳನ್ನು ದೋಚಲಾಗುತ್ತಿದೆ.ಬಹುತೇಕ ಸರ್ಕಾರಿ ಅಧಿಕಾರಿಗಳು ಪರ್ಸೆಂಟೇಜ್ ಪಡೆದು ಕೆಲಸ ಮಾಡಿಕೊಡುವ ಪ್ರವೃತ್ತಿ ಬೆಳೆದಿದೆ. ಸರಕಾರಿ ವಕೀಲರೊಬ್ಬರು ಲೋಕಾಯುಕ್ತರಿಗೆ ಪತ್ರಬರೆದಿರುವ ಬಗ್ಗೆ ಮಾಹಿತಿ ಇದೆ.ಈ ಕುರಿತು ಸಮಗ್ರ ತನಿಖೆ ಅಗತ್ಯ ಇದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಮಾತನಾಡಿ, ’ವಿದ್ಯಾರ್ಥಿಗಳು ಉಪನ್ಯಾಸಕರ ಬೋಧನೆಯನ್ನು ಅರ್ಥೈಸಿಕೊಳ್ಳುವ ಮೂಲಕ ಉತ್ತಮ ವ್ಯಾಸಂಗದ ಕಡೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.
ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್‌ಕ್ರಾಸ್ ಸಂಸ್ಥೆ, ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಘಟಕಗಳ ಸಮಾರೋಪದೊಂದಿಗೆ, ನಾನಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪುರಸಭಾ ಅಧ್ಯಕ್ಷ ಎಚ್.ಕೆ.ಪ್ರಸನ್ನ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಪ್ರಾಂಶುಪಾಲ ಎಸ್.ಆರ್.ಮೂರ್ತಿ, ಪತ್ರಾಂಕಿತ ವ್ಯವಸ್ಥಾಪಕ ಮಂಜುನಾಥ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.