ADVERTISEMENT

ಗ್ರಾಮ ಲೆಕ್ಕಿಗ ಸಾಹೇಬ್ ಪಟೇಲ್ ಹತ್ಯೆಗೆ ಖಂಡನೆ

ಡಿಸಿ ಕಚೇರಿ ಎದುರು ಸರ್ಕಾರಿ ನೌಕರರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 13:48 IST
Last Updated 24 ಡಿಸೆಂಬರ್ 2018, 13:48 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಕಂದಾಯ ಇಲಾಖೆ ನೌಕರರು ಪ್ರತಿಭಟನೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಕಂದಾಯ ಇಲಾಖೆ ನೌಕರರು ಪ್ರತಿಭಟನೆ ನಡೆಸಿದರು.   

ಹಾಸನ : ಮಾನ್ವಿ ತಾಲ್ಲೂಕಿನಲ್ಲಿ ಗ್ರಾಮ ಲೆಕ್ಕಿಗ ಸಾಹೇಬ್ ಪಟೇಲ್‌ ಅವರನ್ನು ಮರಳು ದಂಧೆಕೋರರು ಲಾರಿ ಹತ್ತಿಸಿ ಕೊಲೆ ಮಾಡಿರುವುದನ್ನು ಖಂಡಿಸಿ ಸರ್ಕಾರಿ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಚೀಕಲಪರ್ವಿ ಕ್ರಾಸ್‌ ಬಳಿ ತಪಾಸಣೆ ನಡೆಸುತ್ತಿದ್ದ ಸಾಹೇಬ್ ಪಟೇಲ್‌ ಮೇಲೆ ಮರಳು ತುಂಬಿದ ಟಿಪ್ಪರ್ ಹರಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಮೃತಪಟ್ಟರು. ಈ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯದಲ್ಲಿ ಮರಳು ದಂಧೆ ಕೋರರು ಇದೇ ರೀತಿಯ ಅನೇಕ ಪ್ರಕರಣಗಳಲ್ಲಿ ಕಂದಾಯ ಇಲಾಖೆ ನೌಕರರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ರೀತಿಯ ಘಟನೆಗಳು ಮರುಕಳುಹಿಸುತ್ತಿರುವ ಕಾರಣ ನಿರ್ಭಿತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೌಕರರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಪಟೇಲ್ ಕುಟುಂಬಕ್ಕೆ ಸೂಕ್ತ ರೀತಿಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಮನವಿ ಸಲ್ಲಿಸಿದರು.ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ, ಕಂದಾಯ ಇಲಾಖೆ ನೌಕರರ ಸಂಘದ ಉಪಾಧ್ಯಕ್ಷ ಚಂದ್ರೇಗೌಡ, ಗೌರವಾಧ್ಯಕ್ಷ ಬಿ.ಎಚ್‌.ಮೋಹನ್‌, ಪ್ರಧಾನ ಕಾರ್ಯದರ್ಶಿ ಜೆ.ಪಿ.ವಿಶ್ವನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.