ADVERTISEMENT

ಗ್ಯಾರಂಟಿ ಅನುಷ್ಠಾನ: ಚನ್ನರಾಯಪಟ್ಟಣ ದ್ವಿತೀಯ

ಗ್ಯಾರಂಟಿ ಯೋಜನಾ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಪಿ. ಪ್ರಕಾಶ್‍ಗೌಡ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 2:33 IST
Last Updated 11 ಡಿಸೆಂಬರ್ 2025, 2:33 IST
ಚನ್ನರಾಯಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಎಲ್.ಪಿ. ಪ್ರಕಾಶಗೌಡ ಮಾತನಾಡಿದರು. ತಾ.ಪಂ.ಇಒ ಹರೀಶ್ ಭಾಗವಹಿಸಿದ್ದರು
ಚನ್ನರಾಯಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಎಲ್.ಪಿ. ಪ್ರಕಾಶಗೌಡ ಮಾತನಾಡಿದರು. ತಾ.ಪಂ.ಇಒ ಹರೀಶ್ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು ಜಿಲ್ಲೆಯಲ್ಲಿಯೇ ಎರಡನೇ ಸ್ಥಾನದಲ್ಲಿದೆ’ ಎಂದು ಗ್ಯಾರಂಟಿ ಯೋಜನಾ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಪಿ. ಪ್ರಕಾಶ್‍ಗೌಡ ಹೇಳಿದರು.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ತಾಲ್ಲೂಕು ಮೂರನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸುವ ಗುರಿ ಹೊಂದಲಾಗಿದೆ. ಪ್ರತಿ ತಿಂಗಳು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ತಾಲ್ಲೂಕಿಗೆ ₹25.70 ಕೋಟಿ ಅನುದಾನ ಬಿಡುಗಡೆಯಾಗುತ್ತಿದೆ’ ಎಂದರು.

‘ಪಟ್ಟಣ ವ್ಯಾಪ್ತಿಯ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ನ್ಯಾಯಬೆಲೆ ಅಂಗಡಿಯವರ ಸಭೆ ಕರೆದು ಚರ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ಕ್ರಮಬದ್ಧವಾಗಿ ಪಡಿತರ ವಿತರಣೆ ಮಾಡದಿದ್ದರೆ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಇಒ ಜಿ.ಆರ್. ಹರೀಶ್ ಮಾತನಾಡಿ, ‘ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಿಸಲು ರಾಜ್ಯಸರ್ಕಾರ ಒಂದು ಕ್ವಿಂಟಲ್ ಪಡಿತರಕ್ಕೆ ₹150 ಕಮಿಷನ್ ನೀಡುತ್ತದೆ. ಹಾಗಾಗಿ ಯಾವುದೇ ಲೋಪವಾಗದಂತೆ ಪಡಿತರ ವಿತರಣೆ ಮಾಡಲು ನ್ಯಾಯ ಬೆಲೆ ಅಂಗಡಿಯವರು ಮುಂದಾಗಬೇಕು’ ಎಂದು ತಿಳಿಸಿದರು.

ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯ ಎಸ್.ಎಂ. ನವೀನ್ ಕುಮಾರ್ ಮಾತನಾಡಿ, ‘ಚನ್ನರಾಯಪಟ್ಟಣ– ಮಂಡ್ಯ, ಬೆಂಗಳೂರು ನಗರ ಮತ್ತು ಶ್ರವಣಬೆಳಗೊಳದಿಂದ ಧರ್ಮಸ್ಥಳಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾದ ಎ.ಆರ್. ನಾಗೇಶ್, ಬಿ.ಆರ್. ಕೆಂಪೇಗೌಡ, ಎ.ಪಿ. ರಂಗಸ್ವಾಮಿ, ನಿಶ್ಚಲ್, ಕೆ.ಎನ್.ನಾಗೇಶ್, ಸಿ.ಎನ್. ಗಣೇಶ್, ಮಿಲ್ಟ್ರಿಮಂಜು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.