ADVERTISEMENT

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಎಚ್.ಡಿ.ರೇವಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮೇ 2022, 15:28 IST
Last Updated 11 ಮೇ 2022, 15:28 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ‘ಪಿಎಸ್‌ಐ ಪರೀಕ್ಷೆ ನೇಮಕಾತಿ ಅಕ್ರಮದ ತನಿಖೆ ಚುರುಕುಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು’ ಎಂದು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.

‘ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದವರು ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಬೇಕು. ಯಾವುದೇ ನೇಮಕಾತಿಯನ್ನು ಸರಿಯಾಗಿ ಮಾಡಬೇಕು. ಇಲ್ಲವಾದರೆ ಬಡವರು, ಪ್ರಾಮಾಣಿಕರಿಗೆ ಅನ್ಯಾಯವಾಗಲಿದೆ. ಮಕ್ಕಳು ಪಿಎಸ್‌ಐ ಆಗಲಿ ಎಂಬ ಆಸೆಗೆ ಹಲವರು ಹೊಲ, ಮನೆ ಮಾರಿ ಮಧ್ಯವರ್ತಿಗಳಿಗೆ ನೀಡಿರುವ ಹಣವನ್ನು ವಾಪಸ್‌ ಕೊಡಿಸಬೇಕು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರೀಕ್ಷೆ, ಕೆಪಿಎಸ್‌ಸಿ ನಡೆಸಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬ ವಿಚಾರ ಮಾಧ್ಯಮ‌ಗಳಲ್ಲಿ ವರದಿಯಾಗಿದೆ. ಯಾವುದೇ ಸರ್ಕಾರಿ ಹುದ್ದೆಗೆ ಯಾರನ್ನು ನಾನು ಶಿಫಾರಸ್ಸು ಮಾಡಿಲ್ಲ’ ಎಂದು ಸ್ಪಷ್ಪಪಡಿಸಿದರು.

ADVERTISEMENT

‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಗರಣ ನಡೆದಿದೆ ಎಂಬ ಸಚಿವ ಅಶ್ವಥ್‌ ನಾರಾಯಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರ ಹಾಗೂ ಹಾಲಿ ಬಿಜೆಪಿ ಸರ್ಕಾರದ ಅವಧಿಯಲ್ಲೂ ನಡೆದಿರುವ ಹಗರಣಗಳ ಬಗ್ಗೆ ಸಿಐಡಿ ಅಥವಾ ಸಿಬಿಐ ತನಿಖೆ ನಡೆಸಲಿ. ನನ್ನ ವಿರುದ್ಧ ಬೇಕಾದರೂ ತನಿಖೆ ಮಾಡಿಸಲಿ’ ಎಂದು ತಿರುಗೇಟು ನೀಡಿದರು.

‘ನೆಲಮಂಗಲದಲ್ಲಿ ಟೋಲ್ ಬಳಿ ನಡೆಯುವ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಐದು ಲಕ್ಷ ಜನರು ಭಾಗವಹಿಸಲಿದ್ದು, ಜಿಲ್ಲೆಯಿಂದ 40 ಸಾವಿರ ಜನರು ತೆರಳುವರು. ವಾರಣಾಸಿಯಿಂದ ಮೂವತ್ತು ಪುರೋಹಿತರು ಗಂಗಾಜಲ ತರುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಿಲ್ಲ. ಜೆಡಿಎಸ್‌ಗೆ ಅಧಿಕಾರ ನೀಡಿದರೆ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ರೈತರ ₹ 30 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ’ ಎಂದು ತಿಳಿಸಿದರು.

‘ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಕಿಂಗ್‌ಪಿನ್‌ ಮೂಲ ಹುಡುಕಿಕೊಂಡು ಹೋದರೆ ಸರ್ಕಾರವೇ ಉಳಿಯುವುದಿಲ್ಲ’ ಎಂಬ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ‘ನಾನು ಹಳ್ಳಿ ರೈತ. ಓದಿರುವುದು ಎಸ್ಸೆಸ್ಸೆಲ್ಸಿ. ‘ಕಿಂಗ್‌’ ಗೊತ್ತಿಲ್ಲ, ‘ಪಿನ್‌’ ಗೊತ್ತಿಲ್ಲ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.