ADVERTISEMENT

23 ರಂದು ‘ಹಲ್ಮಿಡಿ ಉತ್ಸವ’

ಉತ್ಸವ ಆಚರಿಸಬೇಕಿದ್ದ ಸರ್ಕಾರ ಮೌನ: ಶಾಸಕ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 11:10 IST
Last Updated 5 ನವೆಂಬರ್ 2019, 11:10 IST
ಕೆ.ಎಸ್‌.ಲಿಂಗೇಶ್‌
ಕೆ.ಎಸ್‌.ಲಿಂಗೇಶ್‌   

ಬೇಲೂರು: ‘ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಮತ್ತು ಹಲ್ಮಿಡಿ ಶಾಸನ ಅಭಿವೃದ್ಧಿ ಟ್ರಸ್ಟ್‌ ವತಿಯಿಂದ ಕನ್ನಡದ ಪ್ರಥಮ ಶಿಲಾ ಶಾಸಕ ದೊರಕಿದ ಹಲ್ಮಿಡಿ ಗ್ರಾಮದಲ್ಲಿ ನ. 23ರಂದು ಹಲ್ಮಿಡಿ ಉತ್ಸವ ಆಚರಿಸಲಾಗುವುದು’ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ತಿಳಿಸಿದರು.

‘ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಹಲ್ಮಿಡಿ ಶಾಸನ ಪ್ರಮುಖ ಕಾರಣವಾಗಿದೆ. ಆದರೆ, ಈ ಶಾಸನ ದೊರೆತ ಹಲ್ಮಿಡಿ ಗ್ರಾಮವನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ. ಹಲ್ಮಿಡಿ ಉತ್ಸವವನ್ನು ಸರ್ಕಾರವೇ ಆಚರಿಸ ಬೇಕಾಗಿದ್ದರೂ ಸರ್ಕಾರ ಈ ಬಗ್ಗೆ ಕ್ರಮಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಸಾಪ ಮತ್ತು ಹಲ್ಮಿಡಿ ಶಾಸನ ಅಭಿವೃದ್ಧಿ ಟ್ರಸ್ಟ್‌ ಹಲ್ಮಿಡಿ ಉತ್ಸವವನ್ನು ಆಚರಿಸುತ್ತಿವೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹಲ್ಮಿಡಿ ಉತ್ಸವ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಂಸದ ಪ್ರಜ್ವಲ್‌ ರೇವಣ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್‌.ನಾಗಾಭರಣ ಅವರನ್ನು ಆಹ್ವಾನಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಹಲ್ಮಿಡಿ ಉತ್ಸವದ ಅಂಗವಾಗಿ ನ.23 ರಂದು ಬೆಳಿಗ್ಗೆ ಶಾಸನದ ಪ್ರತಿಕೃತಿಯ ಮೆರವಣಿಗೆ, ಕಾರ್ಯಕ್ರಮದ ಉದ್ಘಾಟನೆ, ಹಲ್ಮಿಡಿ ಶಾಸನದ ಕುರಿತು ವಿಚಾರಗೋಷ್ಠಿ ಮತ್ತು ಸಂಜೆ ಕೃಷ್ಣೇಗೌಡ ಅವರಿಂದ ಹಾಸ್ಯ ಕಾರ್ಯಕ್ರಮ, ಸ್ವಾತಿ ಭಾರದ್ವಾಜ್‌ ಅವರಿಂದ ಭರತನಾಟ್ಯ ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಹಲ್ಮಿಡಿ ಉತ್ಸವದ ಮೂಲಕ ಸರ್ಕಾರದ ಗಮನ ಸೆಳೆಯುವ ಉದ್ದೇಶ ಹೊಂದಲಾಗಿದೆ’ ಎಂದರು.

‘ಹಲ್ಮಿಡಿಯನ್ನು ಸಮಗ್ರ ಅಭಿವೃದ್ಧಿ ಮಾಡುವುದು ಅವಶ್ಯವಾಗಿದೆ. ಮುಂದಿನ ವರ್ಷ ಗ್ರಾಮ ವಿಕಾಸ ಯೋಜನೆಯಡಿ ₹ 1 ಕೋಟಿ ನೀಡಿ ಅಭಿವೃದ್ಧಿ ಪಡಿಸಲಾಗುವುದು. ಭಾರಿ ಮಳೆಯಿಂದಾಗಿ ಹಾಳಾಗಿರುವ ಹಲ್ಮಿಡಿ ರಸ್ತೆಯನ್ನು ಗುಂಡಿ ಮುಚ್ಚಿ ಸರಿಪಡಿಸಲಾಗುವುದು. ಹಲ್ಮಿಡಿ ಶಾಸನ ಸೇರಿದಂತೆ ಇನ್ನಿತರ ಹಲವು ದೇವಾಲಯಗಳಿಗೆ ಪ್ರಚಾರದ ಕೊರತೆಯಿಂದಾಗಿ ಜನರು ಭೇಟಿ ನೀಡುತ್ತಿಲ್ಲ. ಶಾಲಾ ಮಕ್ಕಳು ಹಲ್ಮಿಡಿ ಗ್ರಾಮಕ್ಕೆ ಭೇಟಿ ನೀಡಲು ಕ್ರಮಕೈಗೊಳ್ಳಲಾಗುವುದು’ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಲ್ಮಿಡಿ ಅಭಿವೃದ್ಧಿ ಟ್ರಸ್ಟ್‌ನ ಕಾರ್ಯದರ್ಶಿ ಎಚ್‌.ಪಿ. ಚನ್ನೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.