ADVERTISEMENT

ಹಾಸನ ತಾಲ್ಲೂಕಿನ ಅಗಿಲೆ ಗ್ರಾಮ: ಗಾಳಿಗೆ ಹಾರಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಚಾವಣಿ

ಕಾರಿನ ಮೇಲೆ ಬಿದ್ದ ಮರದ ತೆಂಗಿನ ಮರ, ಧರೆಗುರುಳಿದ ವಿದ್ಯುತ್ ಕಂಬ

​ಪ್ರಜಾವಾಣಿ ವಾರ್ತೆ
Published 25 ಮೇ 2019, 14:21 IST
Last Updated 25 ಮೇ 2019, 14:21 IST
ಹಾಸನ ತಾಲ್ಲೂಕಿನ ಅಗಿಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚಾವಣಿ ಹಾರಿ ಹೋಗಿದೆ.
ಹಾಸನ ತಾಲ್ಲೂಕಿನ ಅಗಿಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚಾವಣಿ ಹಾರಿ ಹೋಗಿದೆ.   

ಹಾಸನ : ಜಿಲ್ಲೆಯ ವಿವಿಧೆಡೆ ಶುಕ್ರವಾರ ತಡರಾತ್ರಿ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಹಲವೆಡೆ ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳಿವೆ.

ತಾಲ್ಲೂಕಿನ ಅಗಿಲೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಚಾವಣಿ ಹಾರಿ ಹೋಗಿದೆ. ಮಳೆ ನೀರು ಆಸ್ಪತ್ರೆಗೆ ನುಗ್ಗಿ ಕಂಪ್ಯೂಟರ್‌ ಹಾಗೂ ಇತರೆ ವಸ್ತುಗಳಿಗೆ ಹಾನಿಯಾಗಿದೆ. ಮಳೆ ಬಂದಾಗ ರೋಗಿಗಳು ಆಸ್ಪತ್ರೆಯಲ್ಲಿ ಇರಲಿಲ್ಲ.

‘₹ 10 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದು, ಕಳಪೆ ವಸ್ತುಗಳನ್ನು ಬಳಸಲಾಗಿದೆ. ಭಾರೀ ಗಾಳಿಗೆ ಚಾವಣಿ ಹಾರಿ ಹೋಗಿದೆ. ಈ ಬಗ್ಗೆ ಎಂಜಿನಿಯರ್‌ ಅವರನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ಸಂಬಂಧಪಟ್ವ ಎಂಜಿನಿಯರ್‌ ಅವರನ್ನು ಅಮಾನತುಗೊಳಿಸಬೇಕು’ ಎಂದು ಹನುಮಂತಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರು, ನಿವಾಸಿಗಳಾದ ಮೊಗಣ್ಣಗೌಡ, ರವಿ, ಅಗಿಲೆ ನವೀನ್‌, ಅಗಿಲೆ ಯೋಗೀಶ್‌ ಆಗ್ರಹಿಸಿದರು.

ADVERTISEMENT

ನಗರದ ವಿದ್ಯಾನಗರ ಬಡಾವಣೆಯ ಸ್ವಾಮಿ ವಿವೇಕಾನಂದ ಪಾರ್ಕ್ ಮುಂಭಾಗದ ತೆಂಗಿನ ಮರ ಮನೆ ಮುಂದೆ ನಿಲ್ಲಿಸಿದ್ದ ಬಾಬುರಾವ್ ಎಂಬುವವರ ಮಾರುತಿ ಆಲ್ಟೋ ಕಾರ್ ಮೇಲೆ ಬಿದ್ದ ಪರಿಣಾಮ ಸಂಪೂರ್ಣ ಜಖಂಗೊಂಡಿದೆ.

‌ತೆಂಗಿನ ಮರ ಬಿದ್ದ ರಭಸಕ್ಕೆ ಸುತ್ತಲಿನ 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಬೆಳಗ್ಗೆ ಸೆಸ್ಕ್‌ ಸಿಬ್ಬಂದಿ ತುಂಡಾಗಿ ಬಿದ್ದಿದ್ದ ವಿದ್ಯುತ್ ಕಂಬಗಳ ದುರಸ್ತಿ ಮಾಡಿದರು.

ತಣ್ಣೀರು ಹಳ್ಳ ಬೈಪಾಸ್‌ ರಸ್ತೆಯಲ್ಲಿ ವರ್ಕ್‌ಶಾಪ್‌ನ ತಗಡಿನ ಶೆಡ್‌ಗಳು ಜೋರು ಗಾಳಿಗೆ ನೆಲಕಚ್ಚಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.