ADVERTISEMENT

ಹಾಸನ ನಗರಸಭೆ ಅವ್ಯವಹಾರ; ತನಿಖೆಗೆ ಎಚ್.ಡಿ ರೇವಣ್ಣ ಒತ್ತಾಯ

ಅನುಮೋದನೆ ಪಡೆಯದೆ ಕಾಮಗಾರಿ: ಕೋಟ್ಯಂತರ ರೂಪಾಯಿ ಲೂಟಿ: ರೇವಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 16:19 IST
Last Updated 28 ಫೆಬ್ರುವರಿ 2022, 16:19 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ‘ಕಳೆದ 10 ತಿಂಗಳಲ್ಲಿ ನಗರಸಭೆಯಲ್ಲಿ ಸಮರ್ಪಕವಾಗಿ ಸಾಮಾನ್ಯ ಸಭೆ ನಡೆದಿಲ್ಲ. ಆದರೂ ಸರ್ವಾನುಮತದಿಂದ ಅನುಮೋದನೆ ದೊರೆತಿದೆಎಂದು ಲೂಟಿ ಮಾಡುತ್ತಿ ರುವ ಬಗ್ಗೆ ಲೋಕಾಯುಕ್ತ ಅಥವಾ ಸಿಐಡಿ ತನಿಖೆನಡೆಯಬೇಕು’ ಎಂದು ಶಾಸಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು.

‘ನಗರಸಭೆಯಲ್ಲಿ ಬಹುಮತವಿಲ್ಲ ದಿದ್ದರೂ ಮೀಸಲಾತಿ ಬಲದಲ್ಲಿ ಹಿಂಬಾ ಗಿಲಿನಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು ನಗರಸಭೆಯಲ್ಲಿ ಲೂಟಿ ಮಾಡುವುದನ್ನು ಪ್ರಶ್ನಿಸುವ ಜೆಡಿಎಸ್ ಸದಸ್ಯರ ವಿರುದ್ಧ ಪ್ರತಿಭಟನೆ ಮುಂದಾಗುತ್ತಾರೆ. ಇದು ನಗರಸಭೆ ಯಲ್ಲಿ ಆಡಳಿತ ನಡೆಸುವ ರೀತಿಯೇ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು.

‘ಕಾನೂನು ಬಾಹಿರ ಕಾಮಗಾರಿಗಳನ್ನು ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ.ಹಾಸನ ನಗರಸಭೆಯ ಹಿಂದಿನ ಮತ್ತು ಈಗಿನ ಆಯುಕ್ತರು, ಎಂಜಿನಿಯರ್‌ಗಳುಹಾಗೂ ಟೌನ್ ಪ್ಲಾನಿಂಗ್ ಎಂಜಿನಿಯರ್‌ಗಳನ್ನು ಅಮಾನತು ಮಾಡಿ ಅಕ್ರಮ ಗಳ ಬಗ್ಗೆ ತನಿಖೆ ನಡೆಸಬೇಕು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಪ್ರಧಾನ ಕಾರ್ಯದರ್ಶಿ ಯವರು ಕ್ರಮ ಕೈಗೊಳ್ಳಬೇಕು’ ಎಂದುಆಗ್ರಹಪಡಿಸಿದರು.

ADVERTISEMENT

‘ಪ್ರಮುಖ ವಿಷಯಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಅನುಮೋದನೆ ಪಡೆಯದೆ ಸರ್ವಾನುಮತದಿಂದ ಅಂಗೀಕಾರ ಪಡೆಯಲಾಗಿದೆ ಎಂದು ಸುಳ್ಳು ದಾಖಲೆ ನಿರ್ಮಿಸಿ ಹಣ ಲೂಟಿ ಮಾಡಲಾಗುತ್ತಿದೆ. ವಿರೋಧ ಪಕ್ಷ ಜೆಡಿಎಸ್ ಸದಸ್ಯರ ಯಾವುದೇ ಮನವಿಯನ್ನೂ ಸ್ವೀಕರಿಸಿದೆ ಏಕ ಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ನೀರಾವರಿ ಇಲಾಖೆ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ, ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ದೂರಿದರು.

‘ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿಯವರೇ ಒಬ್ಬ ಅಧಿಕಾರಿಯನ್ನು ನೇಮಿಸಿ ಸಂಪೂರ್ಣ ವಿಡಿಯೊ ಮಾಡಿಸಿ ಪರಿಶೀಲಿಸಲಿ. ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಹಾಸನ ನಗರದ ಅಭಿವೃದ್ಧಿ ಹಾಗೂ ಜನಹಿತದ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಹಣ ಲೂಟಿ ಮಾಡುವುದನ್ನು ಜೆಡಿಎಸ್ ಸದಸ್ಯರು ಸಹಿಸುವುದಿಲ್ಲ’ ಎಂದು ಹೇಳಿದರು.

ಈ ಹಿಂದೆ ಜೆಡಿಎಸ್ - ಕಾಂಗ್ರೆಸ್ ಸರ್ಕಾರದಲ್ಲಿ ಮಂಜೂರಾದ ಅಭಿವೃದ್ಧಿ ಯೋಜನೆಗಳನ್ನು ಹೊರತುಪಡಿಸಿದರೆ ಕಳೆದ ಎರಡೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಹಾಸನ ನಗರದ ಅಭಿವೃದ್ಧಿಗೆ ಏನು ಕೊಡುಗೆ ಕೊಟ್ಟಿದೆ? ಯಡಿಯೂರಪ್ಪಅವರು ಅಕ್ರಮವಾಗಿ ಮೀಸಲಾತಿ ನಿಗದಿಪಡಿಸಿ ಹಿಂಬಾಗಿಲಿನಿಂದ ಹಾಸನ ನಗರಸಭೆಯಲ್ಲಿ ಅಧಿಕಾರ ಹಿಡಿದಿದ್ದೇ ಬಿಜೆಪಿಯ ಬಹುದೊಡ್ಡ ಕೊಡುಗೆ ಎಂದು ರೇವಣ್ಣ ವ್ಯಂಗ್ಯವಾಡಿದರು.

‘ಹಾಸನ ನಗರಕ್ಕೆ ಹೊಂದಿಕೊಂಡಿ ರುವ ಸತ್ಯಮಂಗಲ, ಕಾಟೀಹಳ್ಳಿ ಮತ್ತು ಹರಳಹಳ್ಳಿ ಗ್ರಾಮ ಪಂಚಾಯಿತಿಗಳಲ್ಲೂ ಅಕ್ರಮ ನಡೆದಿದ್ದು, ಕೋಟ್ಯಂತರ ರೂಪಾಯಿ ಲೂಟಿ ನಡೆದಿದೆ. ಈ ಬಗ್ಗೆ ತನಿಖೆ ನಡೆಯಲಿ’ ಎಂದು ಆಗ್ರಹಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.