ಅರಸೀಕೆರೆ: ‘ನಗರದ ನ್ಯಾಯಾಲಯ ಆವರಣದಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಸಂಕೀರ್ಣವನ್ನು ಮೇ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡುವರು’ ಎಂದು ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಇಲ್ಲಿನ ಮಾರುತಿ ನಗರ ಬಡಾವಣೆಯಲ್ಲಿರುವ ಗೃಹ ಕಚೇರಿಗೆ ವಕೀಲರ ಸಂಘದ ಅಧ್ಯಕ್ಷ ಸದಾನಂದ ನೇತೃತ್ವದಲ್ಲಿ ಭೇಟಿ ಮಾಡಿದ ವಕೀಲರ ನಿಯೋಗದೊಂದಿಗೆ ಮಾತನಾಡಿ, ‘ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟನೆ ಮಾಡುವುದರೊಂದಿಗೆ ಇನ್ನಿತರ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟ ನಗರಕ್ಕೆ ಆಗಮಿಸಲಿದೆ’ ಎಂದರು.
‘ಸ್ಥಳೀಯ ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖೆಯ ಸತತ ಪ್ರಯತ್ನದ ಫಲವಾಗಿ ಭವ್ಯ ಕಟ್ಟಡ ತಲೆ ಎತ್ತಿ ನಿಂತಿದೆ. ಗುಣಮಟ್ಟದ ಕಾಮಗಾರಿಗಳು, ಮೂಲಸೌಕರ್ಯಗಳೊಂದಿಗೆ ಅಧುನಿಕ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ನೂತನ ಎಂಜಿನಿಯರಿಂಗ್ ಕಾಲೇಜ್, ಪಾಲಿಟೆಕ್ನಿಕ್ ಮತ್ತು ಬಸ್ ನಿಲ್ದಾಣ ಅಭಿವೃದ್ಧಿ, ಸಂತೇಮೈದಾನದಲ್ಲಿ ನೂತನ ವಾಣಿಜ್ಯ ಸಂಕೀರ್ಣ ಸೇರಿದಂತೆ, ವಿವಿಧ ಕಾಮಾಗಾರಿಗಳಿಗೆ ಅಂದು ಪ್ರತ್ಯೇಕ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ತರಕಾರಿ ಮಾರಾಟಗಾರರನ್ನು ಸಂತೇಮೈದಾನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಸಂಕೀರ್ಣಕ್ಕೆ ಸ್ಥಳಾಂತರ ಮಾಡಲಾಗುವುದು. ಹಾಲಿ ತರಕಾರಿ ಮಾರುಕಟ್ಟೆಯನ್ನು ಫುಡ್ ಕೋರ್ಟ್ ಮಾಡುವುದರ ಮೂಲಕ ಬೀದಿ ಬದಿಯ ಆಹಾರ ತಯಾರಕರು ಸೇರಿದಂತೆ ಇನ್ನಿತರ ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳಾಂತರಿಸಲಾಗುವುದು’ ಎಂದರು.
ವಕೀಲರ ಸಂಘದ ಅಧ್ಯಕ್ಷ ಸದಾನಂದ ಮಾತನಾಡಿ, ‘ಶಾಸಕ ಹಾಗೂ ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ ಶಿವಲಿಂಗೇಗೌಡರು ಸರ್ಕಾರದೊಂದಿಗೆ ಸೇತುವೆಯಾಗಿ ಸೇವೆ ಸಲ್ಲಿಸಿ ಭವ್ಯ ಕಟ್ಟಡ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ. ಸಂಘದ ಹಿರಿಯರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರ ಸಲಹೆ ಮಾರ್ಗದರ್ಶನ ಮೂಲಕ ಉತ್ತಮ ಕಟ್ಟಡ ರೂಪುಗೊಳ್ಳಲು ಸಾಧ್ಯವಾಗಿದೆ’ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಪ್ರಕಾಶ್, ಮಾಜಿ ಅಧ್ಯಕ್ಷರಾದ ಲೋಕೇಶ್, ಕೇಶವಮೂರ್ತಿ, ಮಲ್ಲೇಶ್, ರೂಪೇಶ್, ರವಿಕುಮಾರ್, ಜಗದೀಶ್, ಸಿದ್ದಮಲ್ಲಪ್ಪ, ಆದಿಹಳ್ಳಿ ಲೋಕೇಶ್, ನಟರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.