ADVERTISEMENT

ಮೂರು ತಿಂಗಳು ಶಾಲೆ ಆರಂಭಿಸದಿರಿ

ಸರ್ಕಾರಕ್ಕೆ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 8:50 IST
Last Updated 10 ಜೂನ್ 2020, 8:50 IST
ಶಿವರಾಮೇಗೌಡ
ಶಿವರಾಮೇಗೌಡ   

ಹಾಸನ: ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಸರ್ಕಾರ ಆತುರದ ನಿರ್ಧಾರ ಕೈಗೊಳ್ಳದೆ, ತಜ್ಞರ ಅಭಿಪ್ರಾಯ ಪಡೆಯಲಿ. ಇನ್ನೂ ಮೂರು ತಿಂಗಳವರಗೆ ಶಾಲೆ ತೆರೆಯದಿದ್ದರೆ ಒಳಿತು ಎಂದು ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಬಿ.ಇ. ಶಿವರಾಮೇಗೌಡ ಅಭಿಪ್ರಾಯಪಟ್ಟರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ ಶಾಲೆಗಳನ್ನು ತೆರೆದಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲು ಸಾರ್ವಜನಿಕರ ಅಭಿಪ್ರಾಯ ಪಡೆಯಲು ಸರ್ಕಾರ ದಿನಾಂಕ ಪ್ರಕಟಿಸಿದೆ. ಚಿಕ್ಕ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂಬ ಅಭಿಪ್ರಾಯ ಬೆಂಬಲಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಾಲಾ ಸಿಬ್ಬಂದಿ ವೇತನ, ಕಟ್ಟಡ ನಿರ್ವಹಣೆ, ನೀರು, ಇತರೆ ತೆರಿಗೆ ಪಾವತಿ, ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಿಂದ ಪಡೆದ ಸಾಲದ ಮರುಪಾವತಿ, ಬಸ್ ಸಾಲ ಹೀಗೆ ಹಲವು ಬಗೆಯ ಆರ್ಥಿಕ ಸಂಕಷ್ಟವನ್ನು ಶಿಕ್ಷಣ ಸಂಸ್ಥೆಗಳು ಅನುಭವಿಸುತ್ತಿವೆ. ಹಾಗಾಗಿ ಎರಡು ವರ್ಷದಿಂದ ಜಿಲ್ಲೆಗೆ ಬರಬೇಕಾದ ಅಂದಾಜು ₹ 10 ಕೋಟಿ ಆರ್‌.ಟಿ.ಇ ಅನುದಾನವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಅನುದಾನ ರಹಿತ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲ ಮಕ್ಕಳಿಗೂ ಸರ್ಕಾರ ಉಚಿತವಾಗಿ ಪಠ್ಯಪುಸ್ತಕಗಳನ್ನು ನೀಡಬೇಕು. ಲಾಕ್‌ಡೌನ್‌ ಅವಧಿಗೆ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರು ಹಾಗೂ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಕಷ್ಟವಾಗಿರುವುದರಿಂದ ₹ 1,000 ಕೋಟಿ ಬಡ್ಡಿ ರಹಿತ ಸಾಲವನ್ನು ರಾಜ್ಯ ಸರ್ಕಾರ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳಿಂದ ಶುಲ್ಕ ಪಡೆದು ಶಿಕ್ಷಕರು ಮತ್ತು ಸಿಬ್ಬಂದಿಗೆ ವೇತನ ನೀಡಲಾಗುತ್ತಿದೆ. 2019ರ ಡಿ.16ರ ಸುತ್ತೋಲೆಯಂತೆ ನೌಕರರಿಗೆ ಕನಿಷ್ಟ ವೇತನ ನೀಡಲು ಸೂಚಿಸಿದ್ದು, ಇದನ್ನು ಅನುಷ್ಠಾನಗೊಳಿಸಬೇಕಾದಲ್ಲಿ ಪ್ರತಿ ವಿದ್ಯಾರ್ಥಿಯಿಂದ ಶೇಕಡಾ 300ರಷ್ಟು ಹೆಚ್ಚುವರಿ ಶುಲ್ಕ ಪಡೆಯಬೇಕಾಗುತ್ತದೆ. ಇದರಿಂದ ಪೋಷಕರಿಗೆ ಹೊರೆಯಾಗಲಿದೆ. ಹಾಗಾಗಿ ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಆರ್‌.ಟಿ.ಇ ಕಾಯ್ದೆ ಅಡಿಯಲ್ಲಿ ಸೀಟು ನೀಡಲಾಗುತ್ತಿತ್ತು. ಆದರೆ, ಬದಲಾದ ಸರ್ಕಾರದ ನಿಯಮಗಳಿಂದಾಗಿ ಕಳೆದ ವರ್ಷ ಕೇವಲ 17 ಆರ್‌.ಟಿ.ಇ ಸೀಟು ಮಂಜೂರಾಗಿವೆ. ಬಿಪಿಎಲ್‌ ಕಾರ್ಡ್‌ದಾರರಿಗೆ ಈ ಸೌಲಭ್ಯ ಎಂದು ಘೋಷಿಸಿದ್ದರೆ ನಿಜವಾದ ಬಡವರಿಗೆ ಅನುಕೂಲ ಆಗುತ್ತಿತ್ತು ಎಂದರು.

ಒಕ್ಕೂಟದ ಉಪಾಧ್ಯಕ್ಷೆ ತಾರಾ ಎಸ್‌. ಸ್ವಾಮಿ ಮಾತನಾಡಿ, ತಂಡ, ತಂಡವಾಗಿ ತರಗತಿ ನಡೆಸಿದರೂ ಶಿಕ್ಷಕರ ಕೊರತೆ ಸಮಸ್ಯೆ ಉಂಟಾಗಲಿದೆ. ಅಂತರ ಕಾಯ್ದುಕೊಳ್ಳಲು ಸಮಸ್ಯೆ ಎದುರಾಗುತ್ತದೆ. ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರಲ್ಲಿ ಆತಂಕ ಉಂಟಾಗಲಿದೆ. ಆಟ, ಇತ್ಯಾದಿ ಚಟುವಟಿಕೆಗಳು ಮಾಡದಂತೆ ಮಕ್ಕಳನ್ನು ತಡೆಯುವುದು ಕಷ್ಟವಾಗಬಹುದು. ಆದ್ದರಿಂದ ಸರ್ಕಾರ ತಜ್ಞರ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿ. ದಸರೆ, ಬೇಸಿಗೆ ರಜೆ ಬೇಕಾದರೆ ಕಡಿತ ಮಾಡಲಿ. ಮಕ್ಕಳ ಆರೋಗ್ಯ ಎಲ್ಲರಿಗೂ ಮುಖ್ಯ ಎಂದು ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಮಲ್ನಾಡ್‌ ಜಾಕೀರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.