ADVERTISEMENT

ಹಾಸನದಲ್ಲಿ ಕೋವಿಡ್‌ಗೆ ಮೊದಲ ಬಲಿ

ಬೇಲೂರು ತಾಲ್ಲೂಕಿನ ಆರು ಮಂದಿಗೆ ಕೊರೊನಾ ಪಾಸಿಟಿವ್‌, ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 12:31 IST
Last Updated 12 ಜೂನ್ 2020, 12:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ನಗರದಲ್ಲಿ ಕೋವಿಡ್‌ 19 ರೋಗಕ್ಕೆ 60 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಬ್ರೈನ್‌ ಸ್ಟ್ರೋಕ್ ಆಗಿತ್ತು. ಜತೆಗೆ ಮಧುಮೇಹ, ಉಸಿರಾಟದ ತೊಂದರೆಯಿಂದ ಸಹ ಬಳಲುತ್ತಿದ್ದರು. ಅನಾರೋಗ್ಯ ಕಾರಣ ಜೂನ್‌ 10ರಂದು ಸಾಲಗಾಮೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಅದೇ ದಿನ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಬಂದ ಅವರನ್ನು ಹಿಮ್ಸ್‌ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಲಾಗಿದೆ. ಗಂಟಲು ದ್ರವ ಮಾದರಿ ಪರೀಕ್ಷೆಯಿಂದ ಕೋವಿಡ್‌ 19 ಇರುವುದು ದೃಢಪಟ್ಟಿದೆ. ರಾತ್ರಿಯಿಂದಲೇ ಕೋವಿಡ್‌ ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲಎಂದು ಜಿಲ್ಲಾಧಿಕಾರಿ ಆರ್.ಗಿರೀಶ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೃತ ವೃದ್ಧನ ಮಗನಿಗೂ ಸೋಂಕು ತಗುಲಿದ್ದು, ಆತ ತನ್ನ ಸ್ವಂತ ಕ್ಯಾಂಟರ್‌ನಲ್ಲಿ ತಮಿಳುನಾಡಿಗೆ ಆಗಾಗ್ಗೆ ಹೋಗಿ ಬರುತ್ತಿದ್ದ. ವೃದ್ಧನ ಜೊತೆಗೆ ವಾಸವಿದ್ದ ನಾಲ್ವರನ್ನು ಕ್ವಾರಂಟೈನ್‌ ಮಾಡಲಾಗಿದೆ. ವಾಸದ ಪ್ರದೇಶವನ್ನು ಕಂಟೇನ್‌ಮೆಂಟ್‌ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪತ್ತೆ ಚ್ಚುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಈ ಕುಟುಂಬದವರು ಹಳೆಬೀಡಿನಿಂದ 15 ವರ್ಷಗಳ ಹಿಂದೆ ಹಾಸನಕ್ಕ ಬಂದು ವಾಸವಾಗಿದ್ದರು. ನಿಯಮ ಪ್ರಕಾರ ಕುಟುಂಬದ ಸದಸ್ಯರ ಜತೆ ಚರ್ಚಿಸಿ ಅಂತ್ಯಕ್ರಿಯೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. 6 ಮೀಟರ್‌ ಸ್ಥಳ ಗುರುತಿಸಿ, 8 ಅಡಿ ಗುಂಡಿ ತೆಗೆದು ಶವವನ್ನು ಮಣ್ಣು ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 9 ಕೊರೊನಾ ಪಾಸಿಟಿವ್‌ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆಯಾಗಿದೆ. ಕೋವಿಡ್‌ ಆಸ್ಪತ್ರೆಯಿಂದ 170 ಜನರು ಗುಣಮುಖರಾಗಿ ಬಿಡುಗಡೆ ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 56ಕ್ಕೆ ಇಳಿದಿದೆ.

ಮುಂಬೈನಿಂದ ಬಂದಿದ್ದ ಬೇಲೂರು ತಾಲ್ಲೂಕಿನ 20 ವರ್ಷದ (ಪಿ 217) ಯುವಕ, 23 ವರ್ಷದ (ಪಿ 218) ಯುವಕ, 23 ವರ್ಷದ (ಪಿ 219) ಯುವಕ, 35 ವರ್ಷದ (ಪಿ 220) ಪುರುಷ, 28 ವರ್ಷದ (ಪಿ 221) ಪುರುಷ, 52 ವರ್ಷದ (ಪಿ 222) ಪುರುಷ ಸೇರಿದಂತೆ ಆರು ಜನರಿಗೆ ಕೋವಿಡ್‌-19 ದೃಢಪಟ್ಟಿದೆ. ಇವರೆಲ್ಲರೂ ಹಾಸನದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.

ಬೆಂಗಳೂರಿಗೆ ಪ್ರಯಾಣ ಮಾಡಿದ ಹಿನ್ನೆಲೆಯಿಂದ ಸೋಂಕು ದೃಢಪಟ್ಟಿದ್ದ ಅರಕಲಗೂಡು ತಾಲ್ಲೂಕಿನ ಲಾರಿ ಚಾಲಕ (ಪಿ 5479)ನ ಪ್ರಾಥಮಿಕ ಸಂಪರ್ಕ ಹೊಂದಿದ ಆತನ 10 ವರ್ಷದ (ಪಿ 223) ಮಗು ಹಾಗೂ 55 ವರ್ಷದ (ಪಿ 224) ದೊಡ್ಡಪನಿಗೂ ಸೋಂಕು ತಗುಲಿದೆ. ಸೋಂಕಿತರಿಗೆ ಕೋವಿಡ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.