ADVERTISEMENT

ಹಳೇಬೀಡು | ಗುಡಿಗೆ ಮೂಲಸೌಕರ್ಯ ಕೊರತೆ

ಹಳೇಬೀಡು: ಲಗೇಜ್‌ ರೂಂ ಕೊರತೆ, ನಿರ್ವಹಣೆ ಇಲ್ಲದೆ ಕಳೆ ತುಂಬಿರುವ ಉದ್ಯಾನ

ಎಚ್.ಎಸ್.ಅನಿಲ್ ಕುಮಾರ್
Published 16 ಜುಲೈ 2024, 7:06 IST
Last Updated 16 ಜುಲೈ 2024, 7:06 IST

ಸೋಮವಾರ ಮಳೆಯಲ್ಲಿ ಪ್ರವಾಸಿಗರು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ವೀಕ್ಷಿಸಿದರು

ಸೋಮವಾರ ಮಳೆಯಲ್ಲಿ ಪ್ರವಾಸಿಗರು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ವೀಕ್ಷಿಸಿದರು

ಹಳೇಬೀಡು: ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಇಲ್ಲಿನ ಹೊಯ್ಸಳೇಶ್ವರ ದೇವಾಲಯ ಸ್ಥಾನ ಪಡೆದು, ಒಂದು ವರ್ಷವಾದರೂ ಅಭಿವೃದ್ದಿ ಕೆಲಸಗಳು ಗರಿಗೆದರುವ ಸೂಚನೆ ಕಾಣುತ್ತಿಲ್ಲ.

ADVERTISEMENT

‘ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಾರೆ’ ಎಂದು ಅಧಿಕಾರಿಗಳು ಹೇಳಿದರೂ, ಸದ್ಯದ ಪರಿಸ್ಥಿತಿಯಲ್ಲಿ ರಜೆ ದಿನ ಹೊರತುಪಡಿಸಿದರೆ, ಬೇರೆ ದಿನ ಪ್ರವಾಸಿಗರ ಸಂಖ್ಯೆ ಕಡಿಮೆ. ‘ಸೌಲಭ್ಯ ಕೊರತೆಯೇ ಅದಕ್ಕೆ ಕಾರಣ’ ಎಂಬುದು ಸ್ಥಳೀಯರ ಅಭಿಪ್ರಾಯ.

ಯುನೆಸ್ಕೋ ತಂಡ ಪರಿಶೀಲನೆಗೆ ಬರುವ ವೇಳೆಗೆ ದೇವಾಲಯದಲ್ಲಿ ಅಭಿವೃದ್ದಿ ಕೆಲಸಗಳು ನಡೆದಿದ್ದವು. ಪ್ರವೇಶದ್ವಾರದ ಪಕ್ಕದಲ್ಲಿ ಪ್ರವಾಸಿಗರ ಮಾಹಿತಿಗಾಗಿ ನಿರ್ವಚನ ಕೇಂದ್ರ ಆರಂಭಿಸಲಾಯಿತು. ಮ್ಯೂಸಿಯಂನ ಒಳಾಂಗಣದಲ್ಲಿ ವಿಗ್ರಹಗಳಿಗೆ ಹೊಸ ಗಾಜು ಅಳವಡಿಸಿ, ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ವಿದ್ಯುತ್ ಸಂಪರ್ಕ ಸರಿಪಡಿಸಿ, ವಿಗ್ರಹಗಳನ್ನು ರಾಸಾಯನಿಕ ಗಳಿಂದ ಶುದ್ಧೀಕರಿಸಲಾಗಿತ್ತು. ಉದ್ಯಾನದಲ್ಲಿ ಹೊಸ ಹುಲ್ಲಿನ ಲಾನ್ ಹಾಗೂ ಆಕರ್ಷಕ ಗಿಡ ನೆಡ ಲಾಯಿತು. ಕಾರ್ಮಿಕರ ಕೊರತೆಯಿಂದ ಉದ್ಯಾನ ಈಗ ಸೊರಗಿದೆ.

‘ಮಧ್ಯಮ ವರ್ಗದ ಆರ್ಥಿಕ ಶಕ್ತಿಗೆ ತಕ್ಕ ಸ್ಟಾರ್ ಹೋಟೆಲ್‌ ಎಲ್ಲಿಯೂ ಇಲ್ಲ. ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಮಯೂರ ಶಾಂತಲಾ ಹೋಟೆಲ್‌ನಲ್ಲಿ ನಾಲ್ಕು ಕೊಠಡಿಗಳಿವೆ. ಖಾಸಗಿ ಲಾಡ್ಜ್‌ಗಳಲ್ಲಿ 10 ಕೊಠಡಿ ದೊರಕುತ್ತವೆ. ಮಯೂರ ಹೋಟೆಲ್‌ ಅಭಿವೃದ್ಧಿ ಯಾಗಬೇಕು. ಹೆಚ್ಚುವರಿ ಕೊಠಡಿ ನಿರ್ಮಾಣ ವಾಗಬೇಕು. ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು’ ಎನ್ನುತ್ತಾರೆ ಇತಿಹಾಸ ಪ್ರಾಧ್ಯಾಪಕ ಎಚ್.ಎಂ. ಬಸವರಾಜು.

‘ಪ್ರವಾಸೋದ್ಯಮ, ಲೋಕೋ ಪಯೋಗಿ, ಸಾರಿಗೆ, ಗ್ರಾಮೀಣಾಭಿವೃದ್ದಿ ‌ಇಲಾಖೆಯಿಂದ ಅಭಿವೃದ್ದಿ ಕೆಲಸವಾಗುತ್ತಿಲ್ಲ. ಅನುದಾನದ ಕೊರತೆ ನಡುವೆ ಗ್ರಾಮ ಪಂಚಾಯಿತಿಯೇ ಕೆಲಸ ನಿರ್ವಹಿಸಬೇಕಾಗಿದೆ. ಪಟ್ಟಣದ ಸಂಪರ್ಕ ರಸ್ತೆಗಳ ಅಭಿವೃದ್ದಿ ಯಾಗಬೇಕು. ಮೈಸೂರು, ಬೆಂಗಳೂರು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಕಡೆಯಿಂದ ಹಳೇಬೀಡು ಮಾರ್ಗವಾಗಿ ಬಸ್‌ಗಳು ಸಂಚರಿಸುವಂತಾಗಬೇಕು. ರೈಲ್ವೆ ಸೌಲಭ್ಯ ಆಗಬೇಕು’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಮೋಹನ್ ಕುಮಾರ್.

‘ಉತ್ಖನನದಿಂದ ಹೊರ ತೆಗೆದಿರುವ ನಗರೇಶ್ವರ ದೇವಾಲಯಗಳ ಸ್ಮಾರಕ ಅವಶೇಷಗಳು ಮುಚ್ಚಿ ಹೋಗುತ್ತಿದೆ. ಸ್ಮಾರಕ ಸ್ವಚ್ಛತೆಗೆ ಕೇಂದ್ರ ಪುರಾತತ್ವ ಇಲಾಖೆ ಮುಂದಾಗಬೇಕು. ಸಂಕೀರ್ಣ ದಲ್ಲಿ ಉದ್ಯಾನ ನಿರ್ಮಿಸಿ, ಪ್ರವಾಸಿಗರು ಕೆಲ ಕಾಲ ಕಳೆಯುವಂತಾಗಬೇಕು’ ಎನ್ನುತ್ತಾರೆ ರೈತ ಮುಖಂಡ ಗುರುಶಾಂತಪ್ಪ.

ಇತಿಹಾಸದ ಸಾಕ್ಷಿ ಹೊರಬರಲಿ

ಹಳೇಬೀಡಿನಲ್ಲಿ ಸ್ಮಾರಕ, ಅವಶೇಷಗಳಿಗೆ ಕೊರತೆ ಇಲ್ಲ. ಬಸ್ತಿಹಳ್ಳಿಯ ಜೈನ ಬಸದಿಗಳ ಸಂಕೀರ್ಣದ ಹಿಂಭಾಗ ಸ್ಮಾರಕ ಹಾಗೂ ಅವಶೇಷಗಳು ಮಣ್ಣಿನಲ್ಲಿ ಮುಚ್ಚಿ ಹೋಗಿವೆ.

‘ಜೈನ ಬಸದಿಯ ಸುತ್ತ ಜಿನ ಮೂರ್ತಿಗಳು ಹಾಗೂ ಜೈನ ಯೋಗಿಗಳ ಮೂರ್ತಿಗಳು ದೊರಕಿವೆ. ಅವುಗಳ ನಿರ್ವಹಣೆ ಇಲ್ಲದಂತಾಗಿದೆ. ಈ ಸ್ಥಳದಲ್ಲಿ ಉತ್ಖನನ ಮುಂದುವರಿಸಿದರೆ ಜೈನ ಮಠ ಹಾಗೂ ಬಸದಿಗಳ ಇನ್ನಷ್ಟು ಅವಶೇಷಗಳು ದೊರಕುತ್ತವೆ’ ಎನ್ನುತ್ತಾರೆ ಪುರಾತತ್ವ ಶಾಸ್ತ್ರಜ್ಞರು.

‘ಕೇಂದ್ರ ಪುರಾತತ್ವ ಸರ್ವೇಕ್ಷಣ ಇಲಾಖೆ ಹೆಚ್ಚುವರಿ ಶೌಚಾಲಯ ನಿರ್ಮಿಸಿದ್ದು, ಮತ್ತೊಂದಕ್ಕೆ ‌ಪ್ರಸ್ತಾವ ಸಲ್ಲಿಸಲಾಗಿದೆ. ಪ್ರವಾಸಿಗರ ಲಗೇಜು ಸುರಕ್ಷಿತವಾಗಿರಲು ಕ್ಲಾಕ್ ರೂಂ, ಕೆಫೆಟೇರಿಯಾ ಆಗಬೇಕು. ಜೈನ ಬಸದಿ ಬಳಿ ಶೌಚಾಲಯ ಬೇಕು. ಪ್ರವಾಸೋದ್ಯಮ ಇಲಾಖೆಯೂ ಕೈಜೋಡಿಸಬೇಕು’ ಎನ್ನುತ್ತಾರೆ ವರ್ತಕ ಶಿವಕುಮಾರ್.

ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವ ಮೊದಲೇ ಅಭಿವೃದ್ದಿ ನಡೆದಿದೆ. ಹೆಚ್ಚುವರಿ ಸೌಲಭ್ಯಕ್ಕಾಗಿ ಅನುದಾನಕ್ಕೆ ಕಾಯುತ್ತಿದ್ದೇವೆ.
ಗೌತಮ್, ಸಹಾಯಕ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.