ADVERTISEMENT

‘ಅಮೃತ್‌’: ಪೈಪ್‌ ಅಳವಡಿಕೆಗೆ ವಾರದ ಗಡುವು

ಕಾಮಗಾರಿ ಪರಿಶೀಲಿಸಿ, ಸಲಹೆ, ಸೂಚನೆ ನೀಡಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 14:22 IST
Last Updated 24 ಜೂನ್ 2019, 14:22 IST
ಹಾಸನದಲ್ಲಿ ಅಮೃತ್‌ ಯೋಜನೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಅಕ್ರಂ ಪಾಷಾ ಮತ್ತು ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಪರಿಶೀಲನೆ ನಡೆಸಿದರು.
ಹಾಸನದಲ್ಲಿ ಅಮೃತ್‌ ಯೋಜನೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಅಕ್ರಂ ಪಾಷಾ ಮತ್ತು ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಪರಿಶೀಲನೆ ನಡೆಸಿದರು.   

ಹಾಸನ: ನಗರ ವ್ಯಾಪ್ತಿಯಲ್ಲಿ ಅಮೃತ್‌ ಯೋಜನೆಯಡಿ ಕೈಗೊಂಡಿರುವ ಪೈಪ್ ಅಳವಡಿಕೆ ಕಾಮಗಾರಿಗಳನ್ನು ವಾರದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ನಗರ ನೀರು, ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಾಲಗಾಮೆ ರಸ್ತೆಯಲ್ಲಿ ಅಮೃತ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಮತ್ತು ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದಲ್ಲಿ ಏರು ಕೊಳವೆ ಮಾರ್ಗ (ರೈಸಿಂಗ್ ಮೈನ್) ಅಳವಡಿಕೆ ಕಾರ್ಯ ಪರಿಶೀಲಿಸಿದರು.‌

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರಿಗೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸೂಚಿಸುವಂತೆ ಎಂಜಿನಿಯರ್‌ಗಳಿಗೆ ಹೇಳಿದ ಅವರು, ಇಲ್ಲವಾದಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ನಂತರ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿ ನಗರಸಭೆಯ ಅಮೃತ್ ಯೋಜನೆಯಡಿ ಪ್ರಾರಂಭಗೊಂಡಿದ್ದ ಏರು ಕೊಳವೆ ಮಾರ್ಗ (ರೈಸಿಂಗ್ ಮೈನ್) ವೀಕ್ಷಿಸಿ ಸಾರ್ವಜನಿಕರೊಂದಿಗೆ ಯೋಜನೆಯ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದರು.

ಇದೇ ವೇಳೆ ಸಾಲಗಾಮೆ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ರಸ್ತೆ ಕಾಮಗಾರಿ ವೀಕ್ಷಿಸಿ, ಶೀಘ್ರ ಕೆಲಸ ಪೂರ್ಣಗೊಳಿಸಲು ನಿರ್ದೇಶನ ನೀಡಿದ ಅವರು, ವಿಳಂಬ ಮಾಡಿದರೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚನೆ ನೀಡಿದರು.

ಇದೇ ವೇಳೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಮರಗಳ ದಿಂಡುಗಳನ್ನು ಗಮನಿಸಿ, ಅವುಗಳನ್ನು ತೆರೆವುಗೊಳಿಸಲು ಅರಣ್ಯ ಇಲಾಖೆಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಕೃಷ್ಣ ಮೂರ್ತಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಕರಿಯಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಜಗದೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.