ADVERTISEMENT

ಸ್ವಚ್ಛತೆಯಲ್ಲಿ ಹಾಸನ ಮಾದರಿಯಾಗಲಿ

ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 12:46 IST
Last Updated 3 ಮಾರ್ಚ್ 2021, 12:46 IST
ಹಾಸನದಲ್ಲಿ ಏರ್ಪಡಿಸಿದ್ದ ಸ್ವಚ್ಛತೆ ಕುರಿತ ಜಾಗೃತಿ ಜಾಥಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜರಾಂ ಚಾಲನೆ ನೀಡಿದರು.
ಹಾಸನದಲ್ಲಿ ಏರ್ಪಡಿಸಿದ್ದ ಸ್ವಚ್ಛತೆ ಕುರಿತ ಜಾಗೃತಿ ಜಾಥಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜರಾಂ ಚಾಲನೆ ನೀಡಿದರು.   

ಹಾಸನ: ಸಾರ್ವಜನಿಕರು ನಗರದ ಸ್ವಚ್ಛತೆ, ಆರೋಗ್ಯ ದೃಷ್ಟಿಯಿಂದ ನಗರಸಭೆಗೆ ಸಹಕರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕವಿತ ರಾಜಾರಾಂ ಮನವಿ ಮಾಡಿದರು.

ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಸ್ವಚ್ಛ ಭಾರತ ಅಭಿಯಾನ ಅಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ನಗರ, ಹಸಿ ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸಲು ಬುಧವಾರ ಏರ್ಪಡಿಸಿದ್ದ ಕಾಲ್ನಡಿಗೆ ಜಾಥಾ ಉದ್ಘಾಟಿಸಿ ಮಾತನಾಡಿದರು.

ಸುತ್ತಮುತ್ತಲ ಪರಿಸರ ಶುಚಿಯಾಗಿ ಇಟ್ಟುಕೊಳ್ಳಬೇಕು. ಇದರಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು. ಎಲ್ಲೆಂದರಲ್ಲಿ ಕಸ ಬಿಸಾಡಬಾರದು. ಸ್ವಚ್ಛತೆಯಲ್ಲಿ ಹಾಸನವನ್ನು ಮಾದರಿ ಜಿಲ್ಲೆಯಾಗಿ ರೂಪಿಸುವಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯ ಎಂದು ತಿಳಿಸಿದರು.

ADVERTISEMENT

ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ಮನೆ ಮನೆ ಕಸ ಸಂಗ್ರಹ ವಾಹನಗಳಿಗೆ ಕಸ ನೀಡದೆ ಬೆಳಗ್ಗೆ ವಾಯುವಿಹಾರಕ್ಕೆ ತೆರಳುವಾಗ ದ್ವಿಚಕ್ರ, ಕಾರುಗಳಲ್ಲಿ ಹಾಗೂ ಅಂಗಡಿ ಮಾಲೀಕರು ರಸ್ತೆ ಬದಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಮನೆಯ ತ್ಯಾಜ್ಯ ಹಾಗೂ ಇತರೆ ವಸ್ತುಗಳನ್ನು ರಸ್ತೆಬದಿ ಹಾಕುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಮನಹರಿಸಿ ಎಚ್ಚರಿಕೆ ನೀಡಿದ್ದರೂ ಮತ್ತೆ ಕಸ ಹಾಗೂ ಕಟ್ಟಡದ ತ್ಯಾಜ್ಯ ಎಸೆಯಲಾಗುತ್ತಿದೆಎಂದು ಬೇಸರ ವ್ಯಕ್ತಪಡಿಸಿದರು.

ಕಸ ಎಸೆಯುವವರನ್ನು ಗುರುತಿಸಿ ನಗರಸಭೆಯಿಂದ ಕಂದಾಯದ ರೂಪದಲ್ಲಿ ದಂಡ ವಿಧಿಸಿ, ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕ ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಆರೋಗ್ಯದ ದೃಷ್ಟಿ ಮತ್ತು ಸುಂದರ ನಗರವನ್ನಾಗಿಸಲು ಸಹಕರಿಸಬೇಕುಎಂದು ತಿಳಿಸಿದರು.

ಪೌರಕಾರ್ಮಿಕರು ‘ನಮ್ಮ ನಡಿಗೆ ತ್ಯಾಜ್ಯ ಮುಕ್ತದ ಕಡೆಗೆ’, ‘ನಮ್ಮ ನಡಿಗೆ ಸ್ವಚ್ಛತೆ ಕಡೆಗೆ’, ‘ಕಸದ ಸಮರ್ಪಕ ವಿಲೇವಾರಿ ಪ್ರತಿಯೊಬ್ಬರ ಕರ್ತವ್ಯ’, ‘ಕಸವನ್ನುಮೂಲದಲ್ಲಿಯೇ ವಿಂಗಡಿಸುವುದು ಸಾರ್ವಜನಿಕರ ಕರ್ತವ್ಯ’ಎಂಬ
ಫಲಕಗಳನ್ನು ಪ್ರದರ್ಶಿಸಿದರು. ಜಾಥಾದಲ್ಲಿ ನಗರಸಭೆ ಸಿಬ್ಬಂದಿ, ಕಲಾತಂಡಗಳು ಭಾಗವಹಿಸಿದ್ದವು.

ನಗರಸಭೆ ಪರಿಸರ ಅಧಿಕಾರಿ ವೆಂಕಟೇಶ್, ಆರೋಗ್ಯ ನಿರೀಕ್ಷಕರು, ಕಲಾವಿದ ಮಾನವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.