ಹಾಸನ: ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾದ ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಬಡಜನರ ಸಮಸ್ಯೆ ಬಗೆಹರಿಸಲು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲಸ ಮಾಡುವ ಸಂದರ್ಭದಲ್ಲಿ ಉದಾಸೀನ ಮಾಡಿದೇ ಕರ್ತವ್ಯ ನಿರ್ವಹಿಸಲು ನಿರ್ದೇಶನ ನೀಡಿದರು.
ಭೂ ಸ್ವಾಧೀನದಲ್ಲಿ ಕೈಬಿಟ್ಟು ಹೋಗಿರುವ ಪ್ರಕರಣಗಳನ್ನು ಪಟ್ಟಿ ಮಾಡಿ ಪರಿಶೀಲನೆ ಮಾಡಲು ಪ್ರತ್ಯೇಕ ಸಭೆ ಕರೆಯಬೇಕು. ಇತ್ತೀಚೆಗೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ಜಮೀನುಗಳ ಖಾತೆಗೆ ಸಂಬಂಧಿಸಿದಂತೆ ಅಹವಾಲು ಬರುತ್ತಿದ್ದು, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸುವಂತೆ ತಿಳಿಸಿದರು.
ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಹನ ನಿಲುಗಡೆಗೆ ಸ್ಥಳಾವಕಾಶ ಇದೆಯೇ ಎಂಬುದನ್ನು ಪರಿಶೀಲಿಸಿದ ನಂತರ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಾತಿ ಪ್ರಮಾಣಪತ್ರ ಕುರಿತು ಬಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, 2007 ರಲ್ಲಿ ಶಿಳ್ಳೆಕ್ಯಾತ ಎಂದು ಜಾತಿ ಪ್ರಮಾಣಪತ್ರ ಇದೆ. ಈಗ ಬುಡಬುಡಿಕೆ ಎಂದು ಬರುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನ್ಯಾಯ ಆಗಬಾರದು. ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕ್ಯಾನ್ಸರ್ ಪೀಡಿತರಿಗೆ ರೆಡಿಯೋ ಥೆರಪಿಗಾಗಿ ಹಿಮ್ಸ್‌ನಲ್ಲಿ ಸ್ಥಾಪಿಸಿರುವ ಯಂತ್ರೋಪಕರಣ ಬಳಕೆ ಕುರಿತು ಮನವಿ ಬಂದ ಹಿನ್ನೆಲೆಯಲ್ಲಿ, ಪರಿಶೀಲನೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 2024 ಮಾರ್ಚ್‍ನಲ್ಲಿ ಸ್ಥಾಪಿಸಲಾಗಿದೆ. ಜುಲೈನಲ್ಲಿ ನಿಂತು ಹೋಗಿದೆ. ಇದರಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ. ಇದರ ಬಗ್ಗೆ ಗಮನಹರಿಸಿ ಎಂದು ನಿರ್ದೇಶನ ನೀಡಿದರು.
ಸಾರ್ವಜನಿಕರ ಮಾಹಿತಿಗಾಗಿ ಹಿಮ್ಸ್‌ನಲ್ಲಿ ದರ ಪಟ್ಟಿಯನ್ನು ಅಳವಡಿಸುವಂತೆ ಸೂಚನೆ ನೀಡಿದ ಅವರು, ಹಿಮ್ಸ್ ಮುಂಭಾಗದಲ್ಲಿ ಆಹಾರ ಮಾರಾಟ ಮಾಡುವ ಅಂಗಡಿಗಳಲ್ಲಿ ಸ್ವಚ್ಛತೆಯಿಲ್ಲ. ಗುಣಮಟ್ಟದ ಆಹಾರ ನೀಡುತ್ತಿಲ್ಲ. ಜೊತೆಗೆ ಅಂಬುಲೆನ್ಸ್‌ಗಳ ಸಂಚಾರಕ್ಕೆ ಅಡೆತಡೆ ಆಗುತ್ತಿದೆ ಇದರ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ರಸ್ತೆ, ದುರಸ್ತಿ, ಭೂಪರಿಹಾರ, ವಿದ್ಯುತ್ ಸಂಪರ್ಕ, ಖಾತೆ, ಆಶ್ರಯ ಮನೆ, ಹಕ್ಕುಪತ್ರ, ಪಹಣಿ ತಿದ್ದುಪಡಿ, ಸ್ಮಶಾನ ಹಾಗೂ ಮತ್ತಿತರ ವಿಷಯಗಳ ಕುರಿತು ಒಟ್ಟು 134 ಅರ್ಜಿಗಳು ಸ್ವೀಕರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಉಪ ಕಾರ್ಯದರ್ಶಿ ಕೃಷ್ಣ ಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಸಕಲೇಶಪುರ ಉಪ ವಿಭಾಗಾಧಿಕಾರಿ ರಾಜೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಪ್ರತಿ ತಾಲ್ಲೂಕಿನಲ್ಲಿ ತಹಶೀಲ್ದಾರರು ತಿಂಗಳ ಮೊದಲ ಶನಿವಾರ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮಾಡುವುದರ ಜೊತೆಗೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು.ಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ
ರಸ್ತೆ ಸುರಕ್ಷತೆ: ಟಾಸ್ಕ್‌ಫೋರ್ಸ್ ರಚಿಸಿ
ಎಲ್ಲ ತಹಶೀಲ್ದಾರ್‌ಗಳು ರಸ್ತೆ ಸುರಕ್ಷತಾ ದೃಷ್ಟಿಯಿಂದ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ಫುಟ್‍ಪಾತ್ ತೆರವು ಆಂದೋಲನ ಮಾಡಲು ಜಿಲ್ಲಾಧಿಕಾರಿ ಲತಾಕುಮಾರಿ ಸೂಚಿಸಿದರು. ನಗರ ಪಟ್ಟಣ ಗ್ರಾಮೀಣ ಪ್ರದೇಶಗಳಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸ್ಥಳೀಯವಾಗಿ ಪರಿಶೀಲಿಸಿ ಅಪಘಾತ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕು ಎಂದರು. ನಿರ್ಲಕ್ಷ್ಯತೆಯಿಂದ ವಾಹನ ಚಲಾಯಿಸಿ ಅಮಾಯಕ ಮತ್ತು ಮುಗ್ಧ ಅಮೂಲ್ಯವಾದ ಜೀವಗಳನ್ನು ಬಲಿಪಡೆಯುವುದನ್ನು ತಪ್ಪಿಸಲು ಹಾಗೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ವಾಹನ ಚಾಲನ ಪರವಾನಗಿ ನೀಡುವ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಅರ್ಹರಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಪರವಾನಗಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮೊಸಳೆಹೊಸಳ್ಳಿಯಲ್ಲಿ ಸಂಭವಿಸಿದ ಹೃದಯವಿದ್ರಾವಕ ದುರ್ಘಟನೆ. ಇದನ್ನು ಬಹಳ ಲಘುವಾಗಿ ಪರಿಗಣಿಸದೇ ಗಂಭೀರ ಚಿಂತನೆ ಮಾಡಿ ಗ್ರಾಮೀಣ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ದುರ್ಘಟನೆಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಿ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.