ಹಾಸನ: ಅಗಲಿದ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಗೌರವಾರ್ಥ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ಸ್ಕಾಲರ್ಸ್ ಇಂಟರ್ ನ್ಯಾಷನಲ್ ಸ್ಕೂಲ್, ಜ್ಞಾನಧಾರೆ, ಜ್ಞಾನದೀಕ್ಷ ಪ್ಯಾರಾ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗೀತ ನಮನ ಕಾರ್ಯಕ್ರಮ ಈಚೆಗೆ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ವೆಂಕಟೇಶಮೂರ್ತಿ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ರಚನೆ ಮಾಡಿದ್ದಾರೆ. ಅವರ ಸಾಹಿತ್ಯ ಓದುಗರನ್ನು ಗಂಭೀರವಾದ ಚಿಂತನೆಗೆ ದೂಡುತ್ತದೆ. ಅವರ ಕವಿತೆಗಳಲ್ಲಿನ ಸಾಲುಗಳು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ ಎಂದರು.
ಸಾಹಿತ್ಯ ಪರಿಷತ್ ಆಯೋಜಿಸಿದ್ದ ಹೊಯ್ಸಳ ಸಾಹಿತ್ಯೋತ್ಸವ, ಹಾಸನ ಸಾಹಿತ್ಯೋತ್ಸವಗಳಲ್ಲಿ ಡಾ.ವೆಂಕಟೇಶಮೂರ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾರ್ಗದರ್ಶಕರಾಗಿದ್ದರು. ಕಾರ್ಯಕ್ರಮದ ರೂಪುರೇಷೆಯ ಕುರಿತು ಸಾಕಷ್ಟು ಸಲಹೆ ನೀಡಿದ್ದರು ಎಂದು ನೆನಪಿಸಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಕವಿ ಬದುಕಿನ ಸಾರವನ್ನು ಕವಿತೆಯಲ್ಲಿ ಹುದುಗಿಸಿರುತ್ತಾರೆ. ಬುತ್ತಿ ಬಿಚ್ಚಿ ಅದನ್ನು ನಾವು ಸವಿಯಬೇಕಿದೆ ಎಂದರು.
ಹಿರಿಯ ಸಾಹಿತಿ ಶೈಲಜಾ ಹಾಸನ, ಗೀತ ನಮನದ ನಿರೂಪಣೆಯಲ್ಲಿ ಎಚ್‍ಎಸ್‍ವಿ ಅವರ ಬದುಕನ್ನು ಪ್ರೇಕ್ಷಕ ವರ್ಗಕ್ಕೆ ಪರಿಚಯಿಸಿದರು. ಡಾ.ವೆಂಕಟೇಶಮೂರ್ತಿ ರಚಿತ 16 ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.
ಗಾಯಕಿ ಬನುಮ ಗುರುದತ್ತ ಕಂಠದಲ್ಲಿ ಮೂಡಿಬಂದ ‘ರೆಕ್ಕೆ ಇದ್ದರೆ ಸಾಕೆ’, ವಾಣಿ ನಾಗೇಂದ್ರ ಪ್ರಸ್ತುತಿ ಪಡಿಸಿದ ‘ಲೋಕದ ಕಣ್ಣಿಗೆ ರಾಧೆಯು ಕೂಡ’, ಹೇಮಾ ಗಣೇಶ್ ದನಿಯಲ್ಲಿ ಮೂಡಿಬಂದ ‘ಅಮ್ಮ ನಾನು ದೇವರಾಣೆ’, ಗಾಯಕ ಮಂಜುನಾಥ್ ಅವರು ಹಾಡಿದ ‘ಕಾಮನ ಬಿಲ್ಲಿನ ಮೇಲೆ ಕೂಗುತಾ ಸಾಗುವ ರೈಲಿದೆ’
ಗೀತೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಸ್ಥಳೀಯ ಕಲಾವಿದರಿಂದ ರೂಪಿಸಲಾಗಿದ್ದ ಗೀತನಮನ ವಿಭಿನ್ನವಾಗಿ ಮೂಡಿಬಂತು.
ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ. ಮದನಗೌಡ, ಉದಯರವಿ, ಲಕ್ಷ್ಮೀಕಾಂತ್, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ಹೆತ್ತೂರು ನಾಗರಾಜ್, ಸಾಹಿತಿ ಎನ್.ಎಲ್. ಚನ್ನೇಗೌಡ, ಕೌಂಡಿನ್ಯ, ಸುಜಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಲೋಕೇಶ್, ರೋಟರಿ ಜಿಲ್ಲೆ 3182 ವಲಯ 9ರ ಸಹಾಯಕ ಗವರ್ನರ್ ಮಂಜುನಾಥ್, ರೋಟರಿ ಸೆಂಟ್ರಲ್ ಅಧ್ಯಕ್ಷ ನಾಗೇಶ್ ಎಂ.ಡಿ., ಕನ್ನಡ ಪರ ಸಂಘಟನೆಗಳ ಮುಖಂಡರಾದ ದಿನೇಶ್‍ಗೌಡ, ಹರೀಶ್, ಕಸಾಪ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.