ADVERTISEMENT

ಸರ್ಕಾರದ ಧೋರಣೆ ವಿರುದ್ಧ ಸದನದಲ್ಲಿ ಧರಣಿ

ಹಾಸನ ಮಹಾನಗರ ಪಾಲಿಕೆಗೆ 3 ವರ್ಷ ಅನುದಾನ ಇಲ್ಲ: ಶಾಸಕ ಸ್ವರೂಪ್‌ ಪ್ರಕಾಶ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 4:24 IST
Last Updated 24 ಜುಲೈ 2025, 4:24 IST

ಹಾಸನ: ಹಾಸನ ಮಹಾನಗರ ಪಾಲಿಕೆಗೆ ಸರ್ಕಾರ ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡದಿದ್ದರೆ, ಜೆಡಿಎಸ್ ಶಾಸಕರೆಲ್ಲ ಸೇರಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಧರಣಿ ನಡೆಸುತ್ತೇವೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು‌, ಕೆಲ ತಿಂಗಳ ಹಿಂದೆ ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪಾಲಿಕೆ ಅಭಿವೃದ್ಧಿಗೆ ₹ 200 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತ್ತು ಎಂದರು.

ಆದರೆ ಜುಲೈ 14ರಂದು ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಪತ್ರ ಬರೆದಿದ್ದು, ಇತ್ತೀಚೆಗೆ ಮೇಲ್ದರ್ಜೆಗೆ ಏರಿಸಲಾದ ಮಹಾನಗರ ಪಾಲಿಕೆಗಳಿಗೆ ಮುಂದಿನ ಮೂರು ವರ್ಷ ಯಾವುದೇ ಹೆಚ್ಚುವರಿ ಹುದ್ದೆ ಮತ್ತು ಅನುದಾನ ಒದಗಿಸಲಾಗುವುದಿಲ್ಲ ಎಂದು ಈಗಾಗಲೇ ಆರ್ಥಿಕ ಇಲಾಖೆಯಿಂದ ಸ್ಪಷ್ಟಪಡಿಸಲಾಗಿದೆ. ಪ್ರಸ್ತುತ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಈ ಹಂತದಲ್ಲಿ ಯಾವುದೇ ಕ್ರಿಯಾಯೋಜನೆಯನ್ನು ತಯಾರಿಸದಂತೆ ಸೂಚಿಸಿದ್ದಾರೆ. ಇದರಿಂದ ನಗರದ ಅಭಿವೃದ್ಧಿ ಕುಂಠಿತವಾಗಲಿದೆ. ಇದನ್ನು ವಿರೋಧಿಸಿ ಧರಣಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ADVERTISEMENT

ಕಳೆದ ಬಾರಿಯ ಬಜೆಟ್ ನಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳಿಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ₹ 2ಸಾವಿರ ಕೋಟಿ ಬಿಡುಗಡೆ ಮಾಡುವ ಕುರಿತು ತಿಳಿಸಲಾಗಿತ್ತು. ಪ್ರಸಕ್ತ ವರ್ಷ ರಾಯಚೂರು, ಧಾರವಾಡ, ಬೀದರ್ ಹಾಗೂ ಹಾಸನ ಪಾಲಿಕೆಗಳಿಗೆ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ ತಲಾ ₹ 600 ಕೋಟಿ ಮೀಸಲಿಡಲು ಉಲ್ಲೇಖಿಸಲಾಗಿತ್ತು. ಆದರೆ ಇದುವರೆಗೆ ಆ ಅನುದಾನವೂ ಬಿಡುಗಡೆ ಆಗಿಲ್ಲ ಎಂದು ದೂರಿದರು.

ಪಾಲಿಕೆ ಮಾಡಿದ್ದಾದರೂ ಏಕೆ?: ಇತ್ತೀಚೆಗೆ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಯಿತು. ಹೆಚ್ಚುವರಿಯಾಗಿ 37 ಗ್ರಾಮಗಳನ್ನು ಸೇರಿಸಲಾಗಿದೆ. ಈ ನಡುವೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗುತ್ತಿಲ್ಲ. ಹೀಗಿರುವಾಗ ಮಹಾನಗರ ಪಾಲಿಕೆ ಮಾಡುವ ಅಗತ್ಯವೆನಿತ್ತು ಎಂದು ಪ್ರಶ್ನಿಸಿದರು.

ಈ ಹಿಂದೆ 37 ಗ್ರಾಮಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಪಂಚಾಯಿತಿಯಿಂದ ಅನುದಾನ ಬರುತ್ತಿತ್ತು. ಇದೀಗ ಮಹಾನಗರ ಪಾಲಿಕೆಗೆ ಸೇರಿಸಿರುವುದರಿಂದ ಅತ್ತ ಪಂಚಾಯಿತಿ ಅನುದಾನವು ಇಲ್ಲವಾಗಿದ್ದು, ಇತ್ತ ಮಹಾನಗರ ಪಾಲಿಕೆಯಿಂದಲೂ ಅಭಿವೃದ್ಧಿ ಕುಂಠಿತವಾಗಿದೆ. ಲಕ್ಷಾಂತರ ರೂಪಾಯಿ ಕಂದಾಯ ಕಟ್ಟುವ ಇಲ್ಲಿನ ನಾಗರಿಕರು ಮೂಲ ಸೌಕರ್ಯ ಕುರಿತು ಪ್ರಶ್ನಿಸಿದಾಗ ಉತ್ತರ ನೀಡುವುದಾದರೂ ಹೇಗೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಸಂಗ್ರಹವಾಗುತ್ತಿರುವ ಕಂದಾಯದ ಹಣದಲ್ಲಿ ಅಲ್ಪ ಸ್ವಲ್ಪ ಅಭಿವೃದ್ಧಿ ಮಾಡಲಾಗುತ್ತಿದೆ. 15ನೇ ಹಣಕಾಸು ಯೋಜನೆಯಡಿ ಬರುವ ಹಣದಿಂದಲೂ ಕೆಲಸ ಮಾಡಲಾಗುತ್ತಿದ್ದು, ಇದರಿಂದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆಯ ಉಪ ಮೇಯರ್‌ ಹೇಮಲತಾ ಕಮಲ್‌ಕುಮಾರ್, ಸದಸ್ಯರಾದ ಶಂಕರ್, ರಫೀಕ್, ಮಹೇಶ್, ಮಂಜಣ್ಣ, ನವೀನ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.